ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ನಾಲ್ವರಿಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಈ ಮೂಲಕ ಬಿಎಸ್​ವೈಗೆ ಸದ್ಯ ರಿಲೀಫ್ ಸಿಕ್ಕಂತಾಗಿದೆ. 


COMMERCIAL BREAK
SCROLL TO CONTINUE READING

ಇಂದು ನಗರದ ಸಿಟಿ ಸಿವಿಲ್ ಕೋರ್ಟ್'ನ ವಿಶೇಷ ನ್ಯಾಯಾಲಯದಿಂದ ಬಿ.ಎಸ್.ಯಡಿಯೂರಪ್ಪ, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಶಾಸಕ ಪ್ರೀತಂಗೌಡ ಮತ್ತು ಪತ್ರಕರ್ತ ಮರಮಕಲ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ದೊರೆತಿದೆ. 


ವೈಯಕ್ತಿಕ ಒಂದು ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಸೂಚಿಸಿರುವ ವಿಶೇಷ ನ್ಯಾಯಾಲಯ, ಸಾಕ್ಷ್ಯ ನಾಶ ಮಾಡದಂತೆ, ಪೊಲೀಸರಿಗೆ ತನಿಖೆಗೆ ಸಹಕರಿಸುವಂತೆ ಮತ್ತು ಅನುಮತಿ ಇಲ್ಲದೆ ಬೇರೆಡೆ ತೆರಳದಂತೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.


ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಫೆಬ್ರವರಿ 8ರಂದು ಬಿಡುಗಡೆ ಮಾಡಿದ್ದ ಆಪರೇಶನ್ ಕಮಲ ಆಡಿಯೋ ಟೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದನೂರು ಅವರ ಪುತ್ರ ಶರಣಗೌಡ ಫೆಬ್ರವರಿ 13 ರಂದು ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಬಿ.ಎಸ್.ಯಡಿಯೂರಪ್ಪ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.