ನವದೆಹಲಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಹಾನ್ ಕೋಪಿಷ್ಠ ಎಂಬ ಮಾತು ಎಲ್ಲರಿಗೂ ಗೊತ್ತಿರುವ ಸಂಗತಿ. ‌ಯಡಿಯೂರಪ್ಪ ಕೋಪಿಸಿಕೊಳ್ಳಲು ಕಾರಣಗಳೇ ಬೇಕಿಲ್ಲವಂತೆ. ಇನ್ನು ಕಾರಣ ಸಿಕ್ಕಿದರೆ... ಎದುರಿರುವವರು ಯಾರು? ಪರಿಸ್ಥಿತಿ ಏನು-ಎಂಥ ಅಂತಾ ನೋಡದೆ ನಖಶಿಖಾಂತ ಉರಿದು ಬೀಳ್ತಾರೆ. ಈಗ ಅಂಥದೇ ಪ್ರಸಂಗ ನಡೆದಿದೆ. ಅವರ ಕೋಪಕ್ಕೆ ಗುರಿಯಾದವರು ಬೇರಾರೂ ಅಲ್ಲ, ಪುತ್ರ ಮತ್ತು ಸಂಸದ ಬಿ.ವೈ.‌ ರಾಘವೇಂದ್ರ.


COMMERCIAL BREAK
SCROLL TO CONTINUE READING

ಅಲ್ಲಿ ರಾಜ್ಯದಲ್ಲಿ ಸರ್ಕಾರವೇ ಬಿದ್ದುಹೋಗುತ್ತೆ, ಕಾಂಗ್ರೆಸ್ ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ. ಯಡಿಯೂರಪ್ಪ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಥ ಶಾ ಅವರನ್ನು ಭೇಟಿ ಮಾಡುತ್ತಾರೆ ಎಂಬ ನಾನಾ ವಿಷಯಗಳು ಚರ್ಚೆ ಆಗುತ್ತಿರುವ ವೇಳೆಯಲ್ಲೇ ಯಡಿಯೂರಪ್ಪ ದಿಢೀರನೆ ದೆಹಲಿಗೆ ಬರಬೇಕಾಯಿತು. ಏಕೆಂದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಕ್ಷಿಣ ಭಾರತದ ಬಿಜೆಪಿ ಸಂಸದರು ಮತ್ತು ರಾಜ್ಯಾಧ್ಯಕ್ಷರ ಸಭೆ ಕರೆದಿದ್ದರು. 


ಖುದ್ದು ಅಮಿತ್ ಶಾ ಕರೆ ಮಾಡಿದ ಮೇಲೆ ಯಡಿಯೂರಪ್ಪ ಹೇಗೆ ತಾನೇ ಕಾರಣ ಹೇಳಿಯಾರು... ಇದ್ದಬದ್ದ ಕೆಲಸವನ್ನೆಲ್ಲಾ ಬದಿಗೆ ಸರಿಸಿ ಗುರುವಾರ ರಾತ್ರಿ ತಡಬಡಾಯಿಸಿ ದೆಹಲಿಗೆ ಬಂದಿಳಿದರು. ಅಷ್ಟರಲ್ಲಿ ಯಡವಟ್ಟಾಗಿತ್ತು. ಸಭೆ ರದ್ದಾಗಿತ್ತು ಮತ್ತು ರದ್ದಾದ ವಿಷಯವನ್ನು ಅವರ ಪುತ್ರ, ಸಂಸದ ಬಿ.ವೈ. ರಾಘವೇಂದ್ರ, ಯಡಿಯೂರಪ್ಪ ಅವರಿಗೆ ತಿಳಿಸಿರಲಿಲ್ಲ. ಹಾಗಂತ ರಾಘವೇಂದ್ರ ವಿಷಯವನ್ನ ಮರೆತಿರಲಿಲ್ಲ ಅಥವಾ ಇಗ್ನೋರ್ ಮಾಡಿರಲಿಲ್ಲ. ಯಡಿಯೂರಪ್ಪ ವಿಮಾನದಲ್ಲಿ ಬರುತ್ತಿದ್ದ ಕಾರಣದಿಂದ ಕಮ್ಯುನಿಕೇಟ್ ಮಾಡಲು ಸಾಧ್ಯವಾಗಿರಲಿಲ್ಲ. 


ಯಡಿಯೂರಪ್ಪ ಕೊರೆಯುವ ಚಳಿಯಲ್ಲಿ ರಾತ್ರಿ 11 ಗಂಟೆಗೆ ದೆಹಲಿಯ ಕರ್ನಾಟಕ ಭವನಕ್ಕೆ ಬಂದರು. ಬಂದ ಕೂಡಲೇ ಸಭೆ ರದ್ದಾದ ಮಾಹಿತಿ ಸಿಕ್ಕಿದೆ‌. ಮಾಹಿತಿ ಸಿಕ್ಕ ತಕ್ಷಣ ದೆಹಲಿಯ ಚಳಿಯಲ್ಲೂ ಬಿಎಸ್ ವೈ ಗರಂ ಆಗಿದ್ದಾರೆ‌. 


ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಸಭೆ ರದ್ದಾದ ಮಾಹಿತಿಯನ್ನು ತಕ್ಷಣವೇ ತಿಳಿಸೋಕೆ ಆಗ್ತಿರಲಿಲ್ಲವಾ? ಮೊದಲೇ‌ ತಿಳಿಸಿದ್ದಿದ್ದರೆ ದೆಹಲಿಗೆ ಬರುತ್ತಲೇ ಇರಲಿಲ್ಲ. ಸರಿಯಾಗಿ ಕಮ್ಯುನಿಕೇಟ್ ಮಾಡೋಕಾಗೊಲ್ವಾ? ವೇಸ್ಟ್ ಆಗಿ ದೆಹಲಿಗೆ ಬಂದೆ. ಅಲ್ಲಿ ನೂರೆಂಟು ಕೆಲಸ ಇವೆ. ಮಾಧ್ಯಮಗಳಲ್ಲಿ ಏನೇನೋ ಸುದ್ದಿ ಓಡಾಡ್ತಿವೆ. ಇಷ್ಟರ ಮಧ್ಯೆ ಇದೊಂದು ಸಮಸ್ಯೆ..' ಅಂತಾ ರಾಘವೇಂದ್ರ ಮೇಲೆ ಯಡಿಯೂರಪ್ಪ ಕೆಂಡಮಂಡಲರಾಗಿದ್ದಾರೆ ಎಂದು ಗೊತ್ತಾಗಿದೆ.