ರಾಜ್ಯ ಉಚಚುನಾವಣೆಯಲ್ಲಿ ಅನರ್ಹರಿಗೆ ಮಣೆ ಹಾಕಿದ ಮತದಾರ; ಬಿಎಸ್ವೈ ಸರ್ಕಾರ ಸೇಫ್
ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಟ್ರೆಂಡಿಂಗ್ ಬರುತ್ತಿದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರ ಬಹುತೇಕ ಸೇಫ್ ಆಗುವ ಮುನ್ಸೂಚನೆ ಕಾಣಿಸುತ್ತಿದೆ.
ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಟ್ರೆಂಡಿಂಗ್ ಬರುತ್ತಿದ್ದು ಮತದಾರ ಪ್ರಭು ಅನರ್ಹರಿಗೆ ಮಣೆ ಹಾಕಿರುವ ಸುಳಿವು ದೊರೆಯುತ್ತಿದೆ.
ಸದ್ಯದ ವರದಿ ಪ್ರಕಾರ ಬಿಜೆಪಿ 11 ಕಡೆ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದ್ದು ಕೇವಲ ಹುಣಸೂರು ಮತ್ತು ಶಿವಾಜಿನಗರ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆಯಿದ್ದು ಉಳಿದೆಲ್ಲಡೆ ಹಿನ್ನಡೆಯಲ್ಲಿದೆ. ಹೊಸಕೋಟೆ, ಕೆ.ಆರ್. ಪೇಟೆ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ರಾಜರಾಜೇಶ್ವರಿ ಕ್ಷೇತ್ರದ ಜೆಡಿಎಸ್ ಜವರಾಯಿಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.
11 ಕ್ಷೇತ್ರಗಳಲ್ಲಿಯೂ ಬಿಜೆಪಿಯ ಅನರ್ಹ ಶಾಸಕರು ಮುನ್ನಡೆ ಸಾಧಿಸುತ್ತಿದ್ದಾರೆ. ಅನರ್ಹ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಹೋಗಿದ್ದಾಗ ಜನ ಪ್ರಶ್ನೆ ಮಾಡಿದ್ದರು, ಆಕ್ಷೇಪ ಮಾಡಿದ್ದರು, ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದಾಗಿ ಜನರಿಗೆ ಅನರ್ಹರ ಬಗ್ಗೆ ವಿರೋಧ ಇದೆ ಎಂಬ ಭಾವನೆ ವ್ಯಕ್ತವಾಗಿತ್ತು. ಆದರೀಗ ಟ್ರೆಂಡ್ ಪ್ರಕಾರ ಅನರ್ಹರೇ ಮೇಲುಗೈ ಸಾಧಿಸಿದ್ದಾರೆ. ಹೀಗಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ಸರ್ಕಾರ ಬಹುತೇಕ ಸೇಫ್ ಆಗುವ ಮುನ್ಸೂಚನೆ ಕಾಣಿಸುತ್ತಿದೆ.
ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ 15, 000, ಬಿಜೆಪಿಯ ನೆಲೆಯೇ ಇಲ್ಲದ ಚಿಕ್ಕಬಳ್ಳಾಪುರದಲ್ಲಿ ಡಾ.ಕೆ ಸುಧಾಕರ್ 8,000 ಮತಗಳ ಭಾರೀ ಅಂತರ ಕಾಯ್ದುಕೊಂಡಿದ್ದಾರೆ. ಕುದುರೆ ವ್ಯಾಪಾರ, ಆಪರೇಷನ್ ಕಮಲಕ್ಕೆ ಅಪಸ್ವರ ವ್ಯಕ್ತವಾಗುವ ಬದಲಿಗೆ ಜೈಕಾರ ಲಭಿಸಿದೆ.