ಕರ್ನಾಟಕ ಬಜೆಟ್; ಏನಿದೆ ಬಿಎಸ್‌ವೈ ಲೆಕ್ಕಾಚಾರ?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈವರೆಗೂ ಆರು ಬಾರಿ ಬಜೆಟ್ ಮಂಡಿಸಿದ್ದಾರೆ.
ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬಜೆಟ್ ಮಂಡಿಸಲಿದ್ದಾರೆ. ಈವರೆಗೂ ಆರು ಬಾರಿ ಬಜೆಟ್ ಮಂಡಿಸಿರುವ ಬಿಎಸ್‌ವೈ ಇಂದು ಏಳನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಬಿಎಸ್‌ವೈ ಜನಪ್ರಿಯ ಬಜೆಟ್ ಮಂಡನೆ ಮಾಡುವ ನಿರೀಕ್ಷೆ ಇದೆ. ಬಿಎಸ್‌ವೈ ಜನಪ್ರಿಯ ಬಜೆಟ್ ಬದಲಿಗೆ ಜನಪರ ಬಜೆಟ್ ಮಂಡಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತಾವು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಪದೇ ಪದೇ ಹೇಳುತ್ತಲೇ ಇದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಸರ್ಕಾರದ ಕೊಡುಗೆ ಏನು ಎಂಬುದನ್ನು ಈ ಬಜೆಟ್ ಮೂಲಕ ಹೇಳಬೇಕಿದೆ.
ಇನ್ನು ಬಿಎಸ್‌ವೈ ಬಜೆಟ್ ಮೇಲೆ ಸಹಜವಾಗಿಯೇ ರೈತರಿಗೆ ಹೆಚ್ಚಿನ ನಿರೀಕ್ಷೆ ಇದ್ದು, ಕೃಷಿ, ನೀರಾವರಿಗೆ ಹೆಚ್ಚಿನ ಕೊಡುಗೆ ನೀಡುವ ಸಾಧ್ಯತೆ ಇದೆ. ಎತ್ತಿನಹೊಳೆ, ಮಹಾದಾಯಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡುವ ನಿರೀಕ್ಷೆ ಇದೆ.
ಇದಲ್ಲದೆ, ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದ್ದು, ಪಡಿತರ ಚೀಟಿದಾರರಿಗೆ ಗೋಧಿ ವಿತರಣೆ ಘೋಷಿಸಬಹುದು ಎನ್ನಲಾಗುತ್ತಿದೆ.
ತಮ್ಮ ಹಿಂದಿನ ಬಜೆಟ್ ಗಳಲ್ಲಿ ಹೆಣ್ಣು ಮಕ್ಕಳಿಗಾಗಿ 'ಭಾಗ್ಯ ಜ್ಯೋತಿ', ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಮೂಲಕ ಖ್ಯಾತಿ ಪಡೆದಿದ್ದ ಬಿಎಸ್‌ವೈ ಈ ಬಾರಿಯ ಬಜೆಟ್ ನಲ್ಲಿ ಮಕ್ಕಳಿಗಾಗಿ ವಿಶೇಷ ಕೊಡುಗೆ ನೀಡಿವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸುಂಕ ಹೆಚ್ಚಳ:
ಸಂಪನ್ಮೂಲ ಸಂಗ್ರಹಣೆಗಾಗಿ ಅಬಕಾರಿ ಸುಂಕ ಹೆಚ್ಚಿಸಬಹುದು. ಇದಲ್ಲದೆ ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ವಿಧಿಸುವ ಸಾಧ್ಯತೆಯೂ ಹೆಚ್ಚಿದೆ.