ಬಿಎಸ್ ಪಿ-ಜೆಡಿಎಸ್ ಮೈತ್ರಿ: ಕಾಂಗ್ರೆಸ್, ಬಿಜೆಪಿಗೆ ದೊಡ್ಡ ಶಾಕ್
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಆರೋಪ-ಪತ್ಯಾರೋಪ ಮಾಡುತ್ತಾ, ಟ್ವಿಟರ್ ಸಮರದಲ್ಲಿ ಬ್ಯುಸಿ ಆಗಿದ್ದರೆ, ಇತ್ತ ಜೆಡಿಎಸ್ ಮುಖ್ಯಸ್ಥ, ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಗೆ ರಣತಂತ್ರವನ್ನೇ ರೂಪಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಆರೋಪ-ಪತ್ಯಾರೋಪ ಮಾಡುತ್ತಾ, ಟ್ವಿಟರ್ ಸಮರದಲ್ಲಿ ಬ್ಯುಸಿ ಆಗಿದ್ದರೆ, ಇತ್ತ ಜೆಡಿಎಸ್ ಮುಖ್ಯಸ್ಥ, ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಗೆ ರಣತಂತ್ರವನ್ನೇ ರೂಪಿಸಿದ್ದಾರೆ.
ಎರಡೂ ಪಕ್ಷಗಳು ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಸಾಧನೆಗಳನ್ನು ಕೊಚ್ಚಿಕೊಳ್ಳುತ್ತಿದ್ದರೆ, ಇತ್ತ ಜೆಡಿಎಸ್, ಬಹುಜನ ಸಮಾಜ ಪಕ್ಷದೊಂದಿಗೆ ಸೈಲೆಂಟ್ ಆಗಿ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ದಲಿತ ಮತಗಳನ್ನು ತನ್ನತ್ತ ಸೆಳೆಯಲು ಜೆಡಿಎಸ್ ಮುಂದಾಗಿದೆ.
ಇದುವರೆಗೂ ಯಾವ ಪಕ್ಷಗಳೊಂದಿಗೂ ಮೈತ್ರಿಯ ಮಾತೇ ಇಲ್ಲ ಎನ್ನುತ್ತಿದ್ದ ಜೆಡಿಎಸ್ ಸಂಸ್ಥಾಪಕ ದೇವೇಗೌಡ ಅವರು, ಇದೀಗ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರೊಂದಿಗೆ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಚುನಾವಣಾ ಮೈತ್ರಿ ಕುರಿತು ಘೋಷಣೆ ಹೊರಡಿಸಿದ್ದಾರೆ.
ಈ ಕುರಿತು ನವದೆಹಲಿಯ ಕಾನಸ್ಟ್ಯೂಷನ್ ಕ್ಲಬ್ ನಲ್ಲಿ ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್ ಅಲಿ ಹಾಗೂ ಬಿಎಸ್ಪಿಯ ರಾಷ್ಟ್ರೀಯ ಕಾರ್ಯದರ್ಶಿ ಸತೀಶ ಚಂದ್ರ ಮಿಶ್ರಾ ಘೋಷಣೆ ಮಾಡಿದರು.
ಇದರಿಂದ ಜೆಡಿಎಸ್ ಕಡೆಗಣಿಸುತ್ತಿದ್ದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆ ಸಂದೇಶವನ್ನು ನೀಡಿರುವ ದೇವೇಗೌಡರು, ಅಹಿಂದಾ ಹೆಸರಿನಲ್ಲಿ ಚುನಾವಣೆ ತಂತ್ರ ರೂಪಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ದಲಿತರ ಮತ ಗಳಿಸಲು ಪ್ಲಾನ್ ರೂಪಿಸುತ್ತಿದ್ದ ಯಡಿಯೂರಪ್ಪ ಅವರಿಗೆ ದೊಡ್ಡ ಆಘಾತವನ್ನೇ ನೀಡಿದ್ದಾರೆ.