ಬೆಂಗಳೂರು: ಹೈಕಮಾಂಡ್ ಗೆ ಕಪ್ಪ ಕೊಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ನಡುವಿನ ಸಂಭಾಷಣೆಯನ್ನು ವಿಧಿವಿಜ್ಞಾನ ಪ್ರಯೋಗಾಲಯ(FSL) ಖಚಿತಪಡಿಸಿದೆ. ಈಗಾಗಲೇ ಈ ವರದಿ ಸೈಬರ್ ಕ್ರೈಂ ವಿಭಾಗಕ್ಕೆ ತಲುಪಿದ್ದು, ಇಂದು ಈ ವರದಿಯನ್ನು ಎಸಿಬಿ ಗೆ ಕಳುಹಿಸುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಫೆಬ್ರವರಿ 12 ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ 'ನಾವು ಕೂಡ ಹೈಕಮಾಂಡ್ ಗೆ ಕೋಟಿ ಕೋಟಿ ದುಡ್ಡು ಕೊಟ್ಟಿದ್ದೇವೆ. ಆದರೆ ನಾವೇನೂ ಡೈರಿಯಲ್ಲಿ ಬರೆದಿಟ್ಟಿದ್ದೇವಾ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಹೈಕಮಾಂಡ್ ಗೆ ಕೊಟ್ಟಿರುವ ಹಣದ ಬಗ್ಗೆ ಡೈರಿ ಬರೆದಿಟ್ಟಿದ್ದಾರೆ' ಎನ್ನುವ ಅರ್ಥದಲ್ಲಿ ಮಾತನಾಡಿಕೊಂಡಿದ್ದರು. ಇಬ್ಬರೂ ಗುಟ್ಟಾಗಿ ನಡೆಸಿದ್ದ ಸಂಭಾಷಣೆ ಮಾಧ್ಯಮಗಳಿಗೆ ಸೋರಿಕೆಯಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ನಂತರದಲ್ಲಿ ಬಿಜೆಪಿ ನಾಯಕರು ಈ ವಿಡಿಯೋ ನಕಲಿ, ಈ ವಿಡಿಯೋದಲ್ಲಿರುವ ಧ್ವನಿ ಬಿಎಸ್ವೈ ಹಾಗೂ ಅನಂತಕುಮಾರ್ ಅವರದ್ದಲ್ಲ ಎಂದು ಪ್ರತಿಪಾದಿಸಿತ್ತು.


ಈ ಕುರಿತಂತೆ ಕೆಪಿಸಿಸಿ ನಾಯಕ ಸಿ.ಎಂ. ಧನಂಜಯ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು. ಇಬ್ಬರೂ ನಾಯಕರ ಧ್ವನಿ ಮಾದರಿ ನೀಡುವಂತೆ ನಿರ್ದೇಶಿಸಬೇಕೆಂದು ಕಾಂಗ್ರೇಸ್ ನ್ಯಾಯಾಲಯದ ಮೊರೆ ಹೋಗಿತ್ತು. 


ಆನಂತರ ನ್ಯಾಯಾಲಯದ ನಿರ್ದೇಶನದಂತೆ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಧ್ವನಿ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ವಿಧಿವಿಜ್ಞಾನ ಸಂಸ್ಥೆಯು ಈ ಸಂಭಾಷಣೆ ಅನಂತಕುಮಾರ್ ಮತ್ತು ಯಡಿಯೂರಪ್ಪ ಅವರದೇ ಎನ್ನುವುದನ್ನು ಖಚಿತಪಡಿಸಿದೆ. ವಿಧಿವಿಜ್ಞಾನ ಸಂಸ್ಥೆಯಿಂದ ಖಚಿತವಾದ ಹಿನ್ನೆಲೆಯಲ್ಲಿ ಎಸಿಬಿ ಯಡಿಯೂರಪ್ಪ ಮತ್ತು ಅನಂತಕುಮಾರ್ ವಿರುದ್ದ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.