ಕೋಳಿಗಳಿಗೂ ಪ್ಯಾಸೆಂಜರ್ ಟಿಕೆಟ್ ನೀಡಿದ ಬಸ್ ಕಂಡಕ್ಟರ್!
ಬಸ್ ಕಂಡಕ್ಟರ್ ಒಬ್ಬರು ಎರಡು ಕೋಳಿಗಳಿಗೆ ಪ್ರಯಾಣಿಕರ ಟಿಕೆಟ್ ನೀಡಿದ ವಿಚಿತ್ರ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಡಿಪೋ ಬಸ್ ಕಂಡಕ್ಟರ್ ಒಬ್ಬರು ಎರಡು ಕೋಳಿಗಳಿಗೆ ಪ್ರಯಾಣಿಕರ ಟಿಕೆಟ್ ನೀಡಿದ ವಿಚಿತ್ರ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಗೌರಿಬಿದನೂರಿನಿಂದ ಮುದ್ದಲೂಡು ಗ್ರಾಮಕ್ಕೆ ತೆರಳುತ್ತಿದ್ದ ಬಸ್ನಲ್ಲಿ ಶ್ರೀನಿವಾಸ್ ಎಂಬುವರು ತಮ್ಮೊಂದಿಗೆ ಬ್ಯಾಗ್'ನಲ್ಲಿ ಎರಡು ಕೋಳಿಗಳನ್ನು ಇಟ್ಟುಕೊಂಡು ಪ್ರಯಾಣಿಸುತ್ತಿದ್ದರು. ಆದರೆ, ಶ್ರೀನಿವಾಸ್ ಬಳಿ ಇದ್ದ ಎರಡು ಕೋಳಿಗಳಿಗೆ ಮಕ್ಕಳ ಹೆಸರಿನಲ್ಲಿ, ಅಂದರೆ ಮಕ್ಕಳಿಗೆ ಅರ್ಧ ದರಕ್ಕೆ ಟಿಕೆಟ್ ನೀಡುವಂತೆ ಆ ಕೋಳಿಗಳಿಗೂ ಎರಡು ಹಾಫ್ ಟಿಕೆಟ್ ನೀಡಿದ್ದಾರೆ ಎನ್ನಲಾಗಿದೆ.
ಶ್ರೀನಿವಾಸ್ ಅವರಿಗೆ 24 ರೂಪಾಯಿ ಮತ್ತು ಒಂದು ಕೋಳಿಗೆ 12 ರೂ.ನಂತೆ ಎರಡು ಕೋಳಿಗೆ 24ರೂಪಾಯಿ ಪಡೆದು ಟಿಕೆಟ್ ನೀಡಿದ್ದಾರೆ. ಸಾಮಾನ್ಯವಾಗಿ ಬಸ್ಸಿನಲ್ಲಿ ಸರಕು ಸಾಗಣೆ ಮಾಡುತ್ತಿದ್ದರೆ ಅದಕ್ಕೆ ಲಗೇಜ್ ಚಾರ್ಜ್ ಎಂದು ಬೇರೆ ಟಿಕೆಟ್ ನೀಡುವ ನಿಯಮವಿದೆ. ಆದರೆ, ಕೋಳಿಗಳಿಗೆ ಮಕ್ಕಳ ಹೆಸರಿನಲ್ಲಿ ಅರ್ಧ ಟಿಕೆಟ್ ನೀಡಿರುವುದು ಇದ್ಯಾವ ಹೊಸ ಸಾರಿಗೆ ನಿಯಮ ಎಂದು ಪ್ರಯಾಣಿಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.
ಕಂಡಕ್ಟರ್ ಅವರ ಈ ವರ್ತನೆಗೆ ಪ್ರಯಾಣಿಕ ಶ್ರೀನಿವಾಸ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.