Cabinet Crisis : ಸಮಯ ನಿಗದಿಯಾದರೂ ನಿವಾರಣೆಯಾಗದ ಸಮಸ್ಯೆ
ಈ ನಡುವೆ ಅರವಿಂದ್ ಬೆಲ್ಲದ್, ಚಂದ್ರಪ್ಪ ಕೂಡ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ರೇಣುಕಾಚಾರ್ಯ ಅವರನ್ನು ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಮನವೊಲಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Chief Minister B.S. Yediyurappa) ಅತ್ತೂ ಕರೆದು ರಾಜ್ಯ ಸಚಿವ ಸಂಪುಟ ಪುನರ್ರಚನೆ ಮಾಡಲು ಹೈಕಮಾಂಡಿನಿಂದ (High Command) ಒಪ್ಪಿಗೆ ಪಡೆದಿದ್ದಾರೆ. ಇವತ್ತು ಮಧ್ಯಾಹ್ನ 3.50ಕ್ಕೆ ಸಮಯವೂ ನಿಗಧಿಯಾಗಿದೆ. 7 ಜನರನ್ನು ಹೊಸದಾಗಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬುದು ನಿಶ್ಚಯವಾಗಿದೆ. 6 ಮಂದಿಯ ಹೆಸರು ಅಂತಿಮಗೊಂಡಿದೆ. ಆದರೆ ಸಂಪುಟದಿಂದ ಒಬ್ಬರನ್ನು ಕೈಬಿಡಬೇಕಾಗಿದ್ದು ಅದು ಯಾರು ಮತ್ತು ಹೊಸದಾಗಿ ಸಚಿವರಾಗಬೇಕಿರುವ ಇನ್ನೊಬ್ಬರು ಯಾರು ಎಂದು ನಿರ್ಧರಿಸಲು ಸಾಧ್ಯವಾಗಿಲ್ಲ.
ಇದೇ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ (BS Yediyurappa) ನಿನ್ನೆ ತಡರಾತ್ರಿವರೆಗೂ ತಮ್ಮ ಸಂಪುಟ ಸಹುದ್ಯೋಗಿಗಳಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಕೂಡ ಭಾಗಿಯಾಗಿದ್ದರು. ಆದರೂ ಈವರೆಗೆ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಇದನ್ನೂ ಓದಿ - B.S.Yediyurappa: ನಾಳೆ 7-8 ಸಚಿವರ ಪ್ರಮಾಣ ವಚನ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ..!
ಈಗಾಗಲೇ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಆರ್. ಶಂಕರ್ ಹಾಗೂ ಎಂಟಿಬಿ ನಾಗರಾಜ್ (MTB Nagaraj) ಅವರಿಗೆ ದೂರವಾಣಿ ಕರೆ ಮಾಡಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದರಾಗಿ ಎಂದು ತಿಳಿಸಿದ್ದಾರೆ. ಇದಲ್ಲದೆ ಎಸ್. ಅಂಗಾರ ಮತ್ತು ಅರವಿಂದ ಲಿಂಬಾವಳಿ ಅವರ ಹೆಸರುಗಳು ಅಂತಿಮಗೊಂಡಿದ್ದು ಅವರಿಗೆ ಕರೆ ಹೋಗುವುದು ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕೆ ಸಿ.ಪಿ. ಯೋಗೇಶ್ವರ್ ಮತ್ತು ಮುನಿರತ್ನ ನಾಯ್ಡು ನಡುವೆ ಪೈಪೋಟಿ ಏರ್ಪಟ್ಟಿದೆ.
ರಾಜ್ಯದಲ್ಲಿ ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ಶಾಸಕರನ್ನು ಬಿಜೆಪಿ (BJP)ಗೆ ಬರುವಂತೆ ಮನವೊಲಿಸಿ ಸರ್ಕಾರ ರಚನೆ ಮಾಡಲು ಶ್ರಮವಹಿಸಿದ್ದೇನೆ, ಅದಕ್ಕಾಗಿ ಮಂತ್ರಿ ಸ್ಥಾನ ಕೊಡಿ ಎನ್ನುವುದು ಸಿ.ಪಿ. ಯೋಗೇಶ್ವರ್ ವಾದ. ಬಿಜೆಪಿ ಸರ್ಕಾರ ರಚನೆಯಾಗಲೆಂದು ತಮ್ಮ ಶಾಸಕ ಸ್ಥಾನವನ್ನೇ ತ್ಯಜಿಸಿ ಬಂದಿದ್ದೇನೆ ತನ್ನನ್ನು ಮಂತ್ರಿ ಮಾಡಿ ಎಂಬುದು ಮುನಿರತ್ನ ನಾಯ್ಡು ಒತ್ತಡ.
ಎಷ್ಟೇ ಸಮಾಧಾನ ಮಾಡಿದರೂ ಮುನಿರತ್ನ ಒಪ್ಪಿಲ್ಲ. 'ನೀವು ಮಾತು ಕೊಟ್ಡಿದ್ದೀರಿ. ಬೇರೆ ಪಕ್ಷ ತೊರೆದು ಬಂದವರಿಗೆಲ್ಲಾ ಮಂತ್ರಿ ಮಾಡಿದ್ದೀರಿ. ಈಗ ಅವರ ಸಾಲಲ್ಲಿ ಇರುವವನು ನಾನೊಬ್ಬನೆ. ನನ್ನನ್ನು ಈಗಲೇ ಮಂತ್ರಿ ಮಾಡಿ' ಎಂದು ಬಿಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ - Cabinet Expansion: ಬಿಎಸ್ ವೈಗೆ ಸಂಪುಟದಲ್ಲಿ 'ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ಫಿಕ್ಸ್'..!
ಮುನಿರತ್ನಗೆ ಮಂತ್ರಿ ಸ್ಥಾನ ನೀಡಲು ಹಾಲಿ ಸಚಿವರೊಬ್ಬರಿಂದ ರಾಜೀನಾಮೆ ಕೊಡಿಸುವ ಬಗ್ಗೆ ಕೂಡ ಯಡಿಯೂರಪ್ಪ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಬಕಾರಿ ಸಚಿವ ನಾಗೇಶ್ ಅಥವಾ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪೈಕಿ ಒಬ್ಬರನ್ನು ಸಂಪುಟದಿಂದ ಕೈ ಬಿಡಬಹುದು. ಈ ಹಿನ್ನೆಲೆಯಲ್ಲಿ ಇಂದು ಅವರನ್ನು ಕರೆಸಿ ಮಾತನಾಡುವ ಸಾಧ್ಯತೆ ಕೂಡ ಇದೆ.
ಈನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಎಂಎಲ್ ಸಿ ಸಿ.ಪಿ. ಯೋಗೇಶ್ವರ್ (CP Yogeshwar), ಶಾಸಕ ಅರವಿಂದ್ ಬೆಲ್ಲದ್, ಚಂದ್ರಪ್ಪ ಕೂಡ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ರೇಣುಕಾಚಾರ್ಯ ಅವರನ್ನು ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಮನವೊಲಿಸಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.