ಬೆಳಗಾವಿ ಅಧಿವೇಶನದಲ್ಲಿ `ಕಂಬಳ` ವಿಧೇಯಕ ಮಂಡನೆಗೆ ಸಚಿವ ಸಂಪುಟ ನಿರ್ಧಾರ
ಬೆಂಗಳೂರು: ಕರಾವಳಿ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿ ಅಂಕಿತ ಹಾಕಿರುವ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಈ ವಿಷಯದ ವಿಧೇಯಕ ಮಂಡನೆಗೆ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.
ಕಂಬಳ ಕ್ರೀಡೆ ನಡೆಸಬೇಕೋ, ಬೇಡವೋ ಎಂಬ ಗೊಂದಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ಈ ವರ್ಷ ಬಾರಿ ಚರ್ಚೆಗೆ ಕಾರಣವಾಗಿದ್ದ ಕರಾವಳಿ ಕ್ರೀಡೆಗೆ ರಾಷ್ಟ್ರಪತಿ ಈಗಾಗಲೇ ಅಂಕಿತ ಹಾಕಿರುವುದರಿಂದ ಮುಂದಿನ ಬೆಳಗಾವಿ ಅಧಿವೇಶನದಲ್ಲಿ 'ಕಂಬಳ' ಮಸೂದೆ ಜಾರಿಗೆ ತರಲು ಸಚಿವ ಸಂಪುಟ ತೀರ್ಮಾನಿಸಿದೆ.
ಈ ವರ್ಷದ ಆರಂಭದಲ್ಲಿ ತಮಿಳುನಾಡಿನ 'ಜಲ್ಲಿಕಟ್ಟು' ಮತ್ತು ಕರ್ನಾಟಕದ 'ಕಂಬಳ' ಎರಡೂ ಗ್ರಾಮೀಣ ಕ್ರೀಡೆಗಳು ದೇಶಾದ್ಯಂತ ಬಹಳ ಚರ್ಚೆಗೆ ಒಳಪಟ್ಟಿದ್ದವು. ಅಲ್ಲದೆ ಪೇಟಾ ದಂತಹ ಪ್ರಾಣಿ ದಯಾ ಸಂಸ್ಥೆಗಳು ಇಂತಹ ಪ್ರಾಣಿ ಹಿಂಸಾ ಕ್ರೀಡೆಗಳಿಗೆ ವಿರೋಧ ವ್ಯಕ್ತ ಪಡಿಸಿದರೆ, ಮತ್ತೊಂದೆಡೆ ಜನಪದೀಯ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಕೆಲವು ಕಾನೂನು ಬಾಧ್ಯತೆಗಳ ನಡುವೆ ಗ್ರಾಮೀಣ ಸೊಗಡನ್ನು ಕಾಪಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಳೆದ ವಾರ ಕಂಬಳ ನಡೆಸದಂತೆ ಪೇಟಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.