ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್!
ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ: ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ
ಬೆಂಗಳೂರು: ಭಾರಿ ಕುತೂಹಲ ಕೆರಳಿಸಿರುವ ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ಮಾಡಲು ಬುಧವಾರ ಕುಮಾರಕೃಪ ಅತಿಥಿಗೃಹದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ..
ಡಿಸೆಂಬರ್ 10 ರಿಂದ ಡಿ.21 ರವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು, ಅಧಿವೇಶನದ ಮರು ದಿನವೇ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನಿರ್ಧರಿಸಿದೆ. ಜೆಡಿಎಸ್ ಇಬ್ಬರು ಶಾಸಕರು ಮತ್ತು ಕಾಂಗ್ರೆಸ್ ನ 6 ಶಾಸಕರನ್ನು ಸಚಿವರಾಗಿ ಆಯ್ಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವಕ್ತಾರ ಡ್ಯಾನಿಶ್ ಅಲಿ ಹೇಳಿದರು.
ಸಮನ್ವಯ ಸಮಿತಿ ಸಭೆಯಲ್ಲಿ ಈ ತಿಂಗಳ 22ರಂದು ಸಂಪುಟ ವಿಸ್ತರಣೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಅದಕ್ಕಿಂತ ಮೊದಲು ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ಖಾತೆ ಹಂಚಿಕೆ ಬಗ್ಗೆ ನಿರ್ಧರಿಸಲಾಗುವುದು. ಆರು ಮಂದಿ ಕಾಂಗ್ರೆಸ್ ಶಾಸಕರು, ಇಬ್ಬರು ಜೆಡಿಎಸ್ ಶಾಸಕರು ಸಂಪುಟ ಸೇರಲಿದ್ದಾರೆ. ಅಂದೇ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರನ್ನೂ ನೇಮಿಸಲಾಗುತ್ತದೆ. ಜತೆಗೆ, ಸಂಸದೀಯ ಕಾರ್ಯದರ್ಶಿ ಹಾಗೂ ರಾಜಕೀಯ ಕಾರ್ಯದರ್ಶಿ ಹುದ್ದೆಗಳಿಗೂ ನೇಮಕ ಮಾಡಲಾಗುವುದು. ಅದೇ ದಿನ ನಿಗಮ ಮಂಡಳಿಗಳಿಗೂ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಯಾವೊಬ್ಬ ಕಾಂಗ್ರೆಸ್-ಜೆಡಿಎಸ್ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ:
ಇದೇ ವೇಳೆ ಆಪರೇಷನ್ ಕಮಲ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮಾಜಿ ಸಚಿವ ಸತೀಶ್ ಜಾರಕಿಹೋಳಿಯವರು ಸೇರಿದಂತೆ ಯಾವೊಬ್ಬ ಕಾಂಗ್ರೆಸ್-ಜೆಡಿಎಸ್ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಅವರಿಗೆ ನಮ್ಮಲ್ಲಿ ಪಕ್ಷ ತೊರೆಯುವಂತಹ ಯಾವ ಸಮಸ್ಯೆಗಳು ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹಿಂದೆ ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಯಶಸ್ವಿಯಾಗಿದ್ದರು, ಈಗಲೂ ಅದೇ ಭ್ರಮೆಯಲ್ಲಿದ್ದಾರೆ. ಆದರೆ ಈ ಬಾರಿ ಹಾಗಾಗಲು ನಾವು ಬಿಡುವುದಿಲ್ಲ. ಯಾರದ್ದೋ ಕಿವಿಮಾತು ಕೇಳಿಕೊಂಡು ರಾಜ್ಯದಲ್ಲಿ ಸರ್ಕಾರ ಪತನವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಈ ಬಗ್ಗೆ ಅವರಿಗೆ ಗೊತ್ತಿದ್ದರೆ ಅದೆಲ್ಲ ಯಡಿಯೂರಪ್ಪನವರಿಗೆ ಚೆನ್ನಾಗಿಯೇ ಗೊತ್ತು ಎಂದು ಯಾಕೆ ಹೇಳುತ್ತಿದ್ದರು? ಎಂದು ವ್ಯಂಗ್ಯವಾಡಿದರು.