ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಆಕ್ಷೇಪಕ್ಕೆ ಮನ್ನಣೆ ನೀಡದೆ ಕೇಂದ್ರ ಸರಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ಹೆಜ್ಜೆ ಕುರಿತು ಚರ್ಚಿಸಲು ಜೂನ್ 30(ಶನಿವಾರ) ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. 


COMMERCIAL BREAK
SCROLL TO CONTINUE READING

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಈ ಸಭೆ ನಡೆಯಲಿದೆ. ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರು, ಕಾವೇರಿ ನದಿ ಪಾತ್ರದ ಶಾಸಕರು, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದನಗಳ ನಾಯಕರು ಹಾಗೂ ಕಾನೂನು ತಜ್ಞರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನೀರು ನಿಯಂತ್ರಣಾ ಸಮಿತಿ ರಚನೆಯಿಂದ ರಾಜ್ಯಕ್ಕೆ ಆಗುವ ತೊಂದರೆ ಮತ್ತು ಅವುಗಳನ್ನು ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಯಲಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಸಬೇಕೇ, ಬೇಡವೇ ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿದೆ.