ಮೈಸೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರ್ವಹಣಾ ಮಂಡಳಿ ರಚನೆಗೆ ಮೊದಲಿನಿಂದಲೂ ನಮ್ಮ ವಿರೋಧವಿದ್ದು, ಈ ನಿಲುವನ್ನು ಸುಪ್ರೀಂಕೋರ್ಟ್ ನಲ್ಲಿ ಬಲವಾಗಿ ಪ್ರತಿಪಾದಿಸುವಂತೆ ನಮ್ಮ ವಕೀಲರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ ವಿಶ್ವಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಡಳಿ ರಚನೆಗೆ ಅವಕಾಶ ಮಾಡಿಕೊಟ್ಟು ಕಾವೇರಿ ಕಣಿವೆಯ ರೈತರ ಹಿತ ಬಲಿಕೊಡುವ ಪ್ರಶ್ನೆಯೇ ಇಲ್ಲ. ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದ್ದು ಆತಂಕ ಬೇಡ ಎಂದರು. 


ವಿಚಾರಣೆ ವೇಳೆ ನ್ಯಾಯಾಲಯದಲ್ಲಿ‌ ನ್ಯಾಯಮೂರ್ತಿಗಳು  ಸಾಂದರ್ಭಿಕವಾಗಿ ಮಂಡಳಿ‌‌ ರಚನೆ ವಿಚಾರ ಪ್ರಸ್ತಾಪ ಮಾಡಿದ್ದಾರೆಯೇ ಹೊರತು ಆದೇಶ ಮಾಡಿಲ್ಲ ಎಂದು ತಿಳಿಸಿದರು.


ನಂತರ ದಸರಾ ಉದ್ಘಾಟಿಸಿದ ನಾಡೋಜ ಕೆ.ಎಸ್. ನಿಸಾರ್ ಅಹಮದ್ ಬಗ್ಗೆ ಮಾತನಾಡಿ, ಅವರು ಕವಿ ಮಾತ್ರವಲ್ಲ, ವೈಚಾರಿಕ ಬರಹಗಾರರು. ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟವರು. ಬಹಳ ವರ್ಷಗಳಿಂದ ನನಗೆ ಅವರ ಸಂಪರ್ಕ ಇದೆ.  ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ನಿಸಾರ್ ಅಹಮದ್ ಸೇರಿದಂತೆ ಅನೇಕ ಖ್ಯಾತ ಸಾಹಿತಿಗಳು ಸಮಿತಿಯಲ್ಲಿದ್ದರು. ನನ್ನ ಬಗ್ಗೆ ಅವರಿಗೆ ಅಪಾರ, ಅಭಿಮಾನ ಇದೆ. ಸೌಮ್ಯ ಸ್ವಭಾವದ ನಿಸಾರ್ ಅಹಮದ್ ಅವರು ಸರಳ, ಸಜ್ಜನಿಕೆಯ ವ್ಯಕ್ತಿ. ಅವರಿಗೆ ನಾಡಿನ ಜನರ ಪರವಾಗಿ ಅಭಿನಂದನೆಗಳು ಎಂದರು.


ಮೈಸೂರು ದಸರಾ ಆರಂಭವಾಗಿ 400 ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ನಮ್ಮಪ್ಪನ ಹೆಗಲ ಮೇಲೆ ಕುಳಿತು ನಾನು ಮೊದಲ ಬಾರಿಗೆ ದಸರಾ ನೋಡಿದ್ದೆ. ಈಗ ಮುಖ್ಯಮಂತ್ರಿಯಾಗಿ ಐದು ದಸರಾ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇನ್ನೂ ಐದು ವರ್ಷ ಮುಖ್ಯಮಂತ್ರಿಯಾಗಿ ದಸರಾ ಉತ್ಸವದಲ್ಲಿ ಭಾಗವಹಿಸುವ ಆಶಯ ಇದೆ. ರಾಜ್ಯದ ಜನ ಆಶೀರ್ವಾದ ಮಾಡಿದರೆ ಆ ಆಶಯ ನೆರವೇರುತ್ತದೆ. ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ ಎಂದರು.


ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರು ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಿಸಿದೆ. ಆದರೆ, ರೈತರ ಬೆಳೆಗಳಿಗೆ ಅವರ ಬೇಡಿಕೆಗೆ ಅನುಗುಣವಾಗಿ ನೀರು ಕೊಡಲಾಗಿಲ್ಲ. ಬದಲಿಗೆ ಕೆರೆಗಳನ್ನು ತುಂಬಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಪಯತ್ನ ಮಾಡುತ್ತಿದ್ದೇವೆ. ಈಗ ಮಳೆ ಆಗಿರುವುದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯಾದ್ಯಂತ  ಮುಂಗಾರು ಹಂಗಾಮಿನಲ್ಲಿ  73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ  ಬಿತ್ತನೆ ಆಗಬೇಕಿತ್ತು. 60 ಲಕ್ಷ ಹೆಕ್ಟೇರ್ ಗೂ ಹೆಚ್ವು ಪ್ರದೇಶದಲ್ಲಿ ಬಿತ್ತನೆ ಆಗಿದೆ. ನಾಡಿನ ಹಲವಾರು ಜಲಾಶಯಗಳು ಭರ್ತಿ ಆಗಿಲ್ಲ.‌ ಕಬಿನಿ ಸೆಪ್ಟೆಂಬರ್ ತಿಂಗಳಲ್ಲಿ ಭರ್ತಿಯಾಗಿರುವುದು ವಿಶೇಷ. 
ಕೆಆರ್ ಎಸ್ ಸಹ ತುಂಬಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.