ಬೆಂಗಳೂರು: ಆ್ಯಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರ ವಕೀಲರೊಂದಿಗೆ ನಿನ್ನೆಯಷ್ಟೇ ಸಿಸಿಬಿ ಕಚೇರಿಗೆ ಹಾಜರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ನಿನ್ನೆ ಸಂಜೆ ಸುಮಾರು 4 ಗಂಟೆಯಿಂದ ತಡರಾತ್ರಿವರೆಗೂ ವಿಚಾರಣೆ ಎದುರಿಸಿದರು. 


COMMERCIAL BREAK
SCROLL TO CONTINUE READING

ನಿನ್ನೆ ಮಧ್ಯರಾತ್ರಿಯವರೆಗೆ ಗಾಲಿ ಜನಾರ್ದನ ರೆಡ್ಡಿಯ ವಿಚಾರಣೆ ನಡೆಸಿರುವ ಸಿಸಿಬಿ ಡಿಸಿಪಿ ಎಸ್. ಗಿರೀಶ್​ ಬಳಿಕ ರೆಡ್ಡಿಯನ್ನು ಕಚೇರಿಯಲ್ಲೇ ಉಳಿಸಿಕೊಂಡಿದ್ದರು. ಇಂದು ಬೆಳಗ್ಗೆ 9 ಗಂಟೆಯಿಂದ ಮತ್ತೆ ವಿಚಾರಣೆ ಆರಂಭವಾಗಲಿದೆ. 


ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆಯಲ್ಲಿ ಸಹಾಯ ಮಾಡುವುದಾಗಿ ಆ್ಯಂಬಿಡೆಂಟ್‌ ಕಂಪನಿಯ ಮಾಲೀಕ ಸೈಯದ್‌ ಅಹಮದ್‌ ಫ‌ರೀದ್‌ ಬಳಿ 57 ಕೆ.ಜಿ. ಚಿನ್ನದ ಗಟ್ಟಿ ಪಡೆದ ಆರೋಪ ಜನಾರ್ದನ ರೆಡ್ಡಿ ಅವರ ಮೇಲಿದೆ. ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಶುಕ್ರವಾರ ರೆಡ್ಡಿಯವರಿಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ನಲ್ಲಿ 48 ಗಂಟೆಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. 


ಈ ಪ್ರಕರಣದಲ್ಲಿ ಇದುವರೆಗೆ ಸುಳಿವು ನೀಡದೇ ನಾಪತ್ತೆಯಾಗಿದ್ದ ಗಾಲಿ ಜನಾರ್ದನ ರೆಡ್ಡಿ, ಪ್ರಕರಣ ಸಂಬಂಧ ಸಿಸಿಬಿ ಪೊಲೀಸರ ನೋಟಿಸ್‌ ಜಾರಿ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 4 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತಮ್ಮ ಪರ ವಕೀಲ ಚಂದ್ರಶೇಖರ್‌ ಮತ್ತು ಪ್ರಕರಣದ ಆರೋಪಿ ಹಾಗೂ ತಮ್ಮ ಆಪ್ತ ಅಲಿಖಾನ್‌ ಜತೆ ಆಗಮಿಸಿದ್ದರು. ಅವರನ್ನು ತಡರಾತ್ರಿವರೆಗೂ ವಿಚಾರಣೆ ನಡೆಸಲಾಯಿತು.


ಸೈಯದ್ ಅಹಮದ್ ಫರೀದ್ ಜತೆ ಯಾವುದೇ ಡೀಲ್ ನಡೆಸಿಲ್ಲ:
ಆ್ಯಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಅಹಮದ್ ಫರೀದ್ ಜತೆ ಯಾವುದೇ ಡೀಲ್ ನಡೆಸಿಲ್ಲ. ಅವರು ಇತರ ರಾಜಕಾರಣಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವಂತೆ ನನ್ನ ಜತೆಯಲ್ಲಿಯೂ ಫೋಟೋ ತೆಗೆಸಿಕೊಂಡಿದ್ದರು. ಫೋಟೋ ತೆಗೆಸಿಕೊಂಡಿರುವ ಕಾರಣಕ್ಕೆ ನನ್ನನ್ನು ಆರೋಪಿ ಎನ್ನುವುದು ಸರಿಯಲ್ಲ ಎಂದು ರೆಡ್ಡಿ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.


ಪ್ರತ್ಯೇಕ ವಿಚಾರಣೆ: 
ಆ್ಯಂಬಿಡೆಂಟ್ ಕಂಪನಿ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (ಫೆಮಾ) ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ತನಿಖೆಯ ಮೇಲೆ ಪ್ರಭಾವ ಬೀರಲು ಜನಾರ್ದನ ರೆಡ್ಡಿ 20 ಕೋಟಿ ರೂ. ಡೀಲ್ ಕುದುರಿಸಿದ ಆರೋಪದ ಬಗ್ಗೆ ಮೊದಲು ರೆಡ್ಡಿ ಯೊಬ್ಬರನ್ನೇ ಕೂರಿಸಿಕೊಂಡು ಪ್ರಶ್ನೆಗಳನ್ನು ಕೇಳಲಾಯಿತು. ಆ್ಯಂಬಿಡೆಂಟ್ ಕಂಪನಿ ಜತೆ ಡೀಲ್ ನಡೆಸಿದ್ದಾರೆ ಎನ್ನಲಾದ ಫೋಟೋ ಹಾಗೂ ಇನ್ನಿತರ ಸಾಕ್ಷ್ಯಗಳನ್ನಿಟ್ಟುಕೊಂಡು ಎಸಿಪಿ ವೆಂಕಟೇಶ ಪ್ರಸನ್ನ ಅವರು ರೆಡ್ಡಿ ವಿಚಾರಣೆ ಆರಂಭಿಸಿದರು. ನಂತರ ಆ್ಯಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಫರೀದ್ ಹಾಗೂ ರೆಡ್ಡಿ ಆಪ್ತ ಅಲಿ ಖಾನ್ ಅವರನ್ನೂ ವಿಚಾರಣೆ ನಡೆಸಲಾಯಿತು.


ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಮೊದಲಿಗೆ ಮೂವರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ನಂತರ ಮುಖಾಮುಖಿ ಕೂರಿಸಿ ಪ್ರಶ್ನೆಗಳನ್ನು ಕೇಳಲಾಯಿತು. ಮೂವರ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು, ನಂತರ ಸಹಿ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.