ಹಲ್ಲೆ ಪ್ರಕರಣ: ನಲಪಾಡ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ್ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ್ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಆರೋಪಿಗಳ ವಿರುದ್ಧ ದಾಖಲಾಗಿದ್ದ ಕೊಲೆ ಯತ್ನ ಆರೋಪ ಸಾಬೀತಾಗಿದ್ದು, ಆರೋಪಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಆರೋಪಪಟ್ಟಿಯಲ್ಲಿ ಲಗತ್ತಿಸಲಾಗಿದೆ. ಹಲ್ಲೆಯು ತೀವ್ರ ಸ್ವರೂಪದ್ದಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದಿದ್ದರಿಂದ ನಂತರ, ಕೊಲೆ ಯತ್ನ ಆರೋಪವನ್ನು ಎಫ್‌ಐಆರ್‌ನಲ್ಲಿ ಪೊಲೀಸರು ಸೇರಿಸಿದ್ದರು. ಈ ಆರೋಪ ಪಟ್ಟಿ ಸಿದ್ದಪಡಿಸಲು ಪೋಲೀಸರು 60ಕ್ಕೂ ಹೆಚ್ಚೂ ಮಂದಿ ಹೇಳಿಕೆಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ಫೆ.17 ರಂದು ಯುಬಿ ಸಿಟಿಯಲ್ಲಿರುವ ಫೆಗ್ರಿ ಕಫೆ ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ಕಾಲು ತಗುಲಿತು ಎಂಬ ಕಾರಣಕ್ಕೆ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತು ಆತನ ಸ್ನೇಹಿತರು ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ನಂತರ ತಲೆಮರೆಸಿಕೊಂಡಿದ್ದ ನಲಪಾಡ್ ಫೆ.19ರಂದು ಪೊಲೀಸರಿಗೆ ಶರಣಾಗಿದ್ದರು. ಮುಖ್ಯ ಆರೋಪಿ ಮೊಹಮದ್ ನಲಪಾಡ್ ಮತ್ತು ಇತರ 6 ಆರೋಪಿಗಳ ವಿರುದ್ಧ ಮಾತ್ರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಕೃಷ್ಣನ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.