ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ: ಸಿದ್ದರಾಮಯ್ಯ
ವಿದೇಶಕ್ಕೆ ಹೋಗುವುದು ತಪ್ಪಲ್ಲ, ಆದರೆ ಎಲ್ಲಕ್ಕಿಂತ ಮೊದಲು ದೇಶದ ಪ್ರಜೆಗಳ ಕಷ್ಟ ಕೇಳಬೇಕಲ್ಲವೇ?- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಾವು ಫೆಬ್ರವರಿಯಲ್ಲಿ ಬರ ಪರಿಹಾರ ನೀಡುವಂತೆ ಸಲ್ಲಿಸಿದ್ದ ಮನವಿಗೆ ಕಳೆದ ವಾರ ಕೇಂದ್ರ ರೂ.1,029 ಕೋಟಿ ಅನುದಾನ ನೀಡಿದೆ. ರಾಜ್ಯದಲ್ಲಿ ಪ್ರವಾಹ ಬಂದು 20 ದಿನಗಳಾದರೂ ಕೇಂದ್ರದಿಂದ ನಯಾಪೈಸೆಯೂ ಬಿಡುಗಡೆಯಾಗಿಲ್ಲ. ಇವರದು ಬಡವರ ವಿರೋಧಿ ಸರ್ಕಾರವಲ್ಲದೆ ಬೇರೇನು? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದೇ ಪದೇ ವಿದೇಶಕ್ಕೆ ಹೋಗುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮದೇ ದೇಶದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಮಯವಿಲ್ಲ ಎಂದು ವ್ಯಂಗ್ಯವಾಡಿರುವ ಸಿದ್ದರಾಮಯ್ಯ, ವಿದೇಶಕ್ಕೆ ಹೋಗುವುದು ತಪ್ಪಲ್ಲ, ಆದರೆ ಎಲ್ಲಕ್ಕಿಂತ ಮೊದಲು ದೇಶದ ಪ್ರಜೆಗಳ ಕಷ್ಟ ಕೇಳಬೇಕಲ್ಲವೇ? ಪ್ರಧಾನಿ ಮೋದಿ ಅವರಿಗೆ ಪ್ರಚಾರದ ಗೀಳು ಎಷ್ಟರ ಮಟ್ಟಿಗೆ ಇದೆಯೆಂದರೆ ಯಾವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೆಚ್ಚು ಹೆಚ್ಚು ಪ್ರಚಾರ ದೊರೆಯುತ್ತದೆಯೋ ಅಂಥದ್ದರಲ್ಲಿ ಮಾತ್ರ ಅವರಿಗೆ ಆಸಕ್ತಿಯಿರುತ್ತದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ, ವೈಮಾನಿಕ ಸಮೀಕ್ಷೆ ಇವುಗಳಿಂದ ಪ್ರಚಾರ ದೊರೆಯದ ಕಾರಣ ಅವರು ರಾಜ್ಯಕ್ಕೆ ಬರುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ರಾಜಕೀಯ ಲಾಭ ನೋಡಬಾರದಿತ್ತು:
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 (ಎ) ರದ್ದು ಮಾಡುವ ಮೊದಲು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆಯಲಿಲ್ಲ, ಜಮ್ಮು ಕಾಶ್ಮೀರದ ರಾಜಕೀಯ ನಾಯಕರು ಮತ್ತು ಅಲ್ಲಿನ ಜನತೆಯ ಅಭಿಪ್ರಾಯ ಕೇಳಲಿಲ್ಲ. ಹಿಂದಿನ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡುವ ಮೊದಲು ಸಂಬಂಧಿತರೆಲ್ಲರ ಜೊತೆ ಚರ್ಚೆ ಮಾಡಬೇಕಾಗಿತ್ತು, ಅದರಲ್ಲಿ ರಾಜಕೀಯದ ಲಾಭ ನೋಡಬಾರದಿತ್ತು. ಸರ್ಕಾರವೊಂದು ಭಾವನಾತ್ಮಕ ವಿಚಾರಗಳ ಮೇಲೆಯೇ ರಾಜಕಾರಣ ಮಾಡುತ್ತಾ ಹೋದರೆ ಜನರ ನೈಜ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಅನಕ್ಷರತೆ, ಹಸಿವು ಇವುಗಳನ್ನು ಬಗೆಹರಿಸುವವರಾರು? ಜನರ ಅನುಕಂಪ ಗಳಿಸುವುದು, ಪ್ರಚಾರ ಪಡೆಯುವುದು, ಅವರನ್ನು ಭಾವನಾತ್ಮಕವಾಗಿ ಮರುಳು ಮಾಡುವುದು ಸರ್ಕಾರದ ಕರ್ತವ್ಯವಲ್ಲ, ದುರಂತವೆಂದರೆ ಕೇಂದ್ರ ಸರ್ಕಾರ ಇದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.