ತಮಿಳುನಾಡು ಕಾವೇರಿ ನೀರು ಕೇಳುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ?
ಮಾನ್ಸೂನ್ ಉತ್ತಮವಾಗಿಲ್ಲದ ಕಾರಣ ನೀರು ಬಿಡುವುದು ಕಷ್ಟ- ಟಿ.ಬಿ.ಜಯಚಂದ್ರ
ಬೆಂಗಳೂರು: ಕಾವೇರಿ ನದಿ ನೀರು ಕೇಳಿ ತಮಿಳುನಾಡು ಸಿಎಂ ಪತ್ರ ಬರೆದಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿರಬಹುದು ಎಂದು ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ನಾಲ್ಕು ಜಲಾಶಯದಲ್ಲಿ ಕುಡಿಯುವ ನೀರು ಶೇಖರಿಸಿದ್ದೇವೆ. ಆದರೆ, ವ್ಯವಸಾಯಕ್ಕೆ ಇನ್ನೂ ನೀರು ಕೊಡುತ್ತಿಲ್ಲ. ತಮಿಳುನಾಡಿಗೆ ಈಗಾಗಲೇ 112 ಟಿಎಂಸಿ ನೀರು ಬಿಟ್ಟಿದ್ದೇವೆ. ನ್ಯಾಯಾಧಿಕರಣ ಸೂಚನೆಯಂತೆ ಮಾನ್ಸೂನ್ ಉತ್ತಮವಿದ್ದಾಗ ಮಾತ್ರ 192 ಟಿಎಂಸಿ ನೀರು ನೀಡಬಹುದು. ಆದರೆ ಮಾನ್ಸೂನ್ ಉತ್ತಮವಾಗಿಲ್ಲದ ಕಾರಣ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಕಷ್ಟ ಎಂದು ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರದ ಜೊತೆ ಸ್ವಲ್ಪ ಮಟ್ಟಿಗೆ ಮೃದು ಧೋರಣೆ ಅನುಸರಿಸುತ್ತಿದೆ. ಜೊತೆಗೆ ತಮಿಳುನಾಡಿನಲ್ಲಿ ಹಿಡಿತ ಸಾಧಿಸಲು ಅವಣಿಸುತ್ತಿದೆ. ಹೀಗಾಗಿ ತಮಿಳುನಾಡು ಸಿಎಂ ಕಾವೇರಿ ನೀರು ಕೇಳುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿರಬಹುದು ಎಂಬ ಧಾಟಿಯಲ್ಲಿ ಸಚಿವ ಜಯಚಂದ್ರ ಪ್ರತಿಕ್ರಿಯಿಸಿದರು.