ನೆರೆ ಪರಿಹಾರ: ಒಂದು ತಿಂಗಳೊಳಗೆ ಕೇಂದ್ರದಿಂದ ಅನುದಾನ ಬಿಡುಗಡೆ- ಡಿವಿಎಸ್
ನೆರೆ ಪರಿಹಾರ ಕಾರ್ಯಗಳಿಗಾಗಿ ಈಗಾಗಲೇ ಕೇಂದ್ರ ಸರ್ಕಾರ 380 ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡಿದೆ. ಮಧ್ಯಂತರ ಪರಿಹಾರವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡಲಿದೆ ಎಂದು ಡಿವಿಎಸ್ ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ನುದಾನ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ ಬೆನ್ನಲ್ಲೇ ಇನ್ನೊಂದು ತಿಂಗಳೊಳಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ಪ್ರಮುಖ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಭರವಸೆ ನೀಡಿರುವ ಡಿವಿಎಸ್, ದೇಶದಲ್ಲಿ ಕರ್ನಾಟಕ ಸೇರಿ ಒಟ್ಟು ಎಂಟು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಹಾನಿಯಾಗಿದೆ. ಇದಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರ 380 ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡಿದೆ. ಮಧ್ಯಂತರ ಪರಿಹಾರವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಇನ್ನೂ ಮಳೆಯಾಗುತ್ತಿದೆ. ಮಳೆ ನಿಂತ ಬಳಿಕವೇ, ಮನೆ ನಿರ್ಮಾಣ ಹಾಗೂ ಇತರ ಕಟ್ಟಡಗಳ ನಿರ್ಮಾಣ ಸಾಧ್ಯ. ಹಾಗಾಗಿ ಈ ಕೆಲಸಗಳು ಆರಂಭವಾಗುವ ವೇಳೆಗೆ ಕೇಂದ್ರದಿಂದ ಅನುದಾನ ದೊರೆಯಲಿದೆ. ಉಳಿದ ಕಾರ್ಯಗಳನ್ನು ರಾಜ್ಯ ಸರ್ಕಾರ ನಿಭಾಯಿಸುತ್ತಿದೆ ಎಂದು ಹೇಳಿದ್ದಾರೆ.