ನಾಳೆಯಿಂದ ಸಿಇಟಿ ಪರೀಕ್ಷೆ
ರಾಜ್ಯಾದ್ಯಂತ ಒಟ್ಟು 430 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 1,98, 639 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ತೆಗೆದುಕೊಳ್ಳಲಿದ್ದು, 1,00,071 ಪುರುಷ ಮತ್ತು 98,568 ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಏಪ್ರಿಲ್ 18ರಿಂದ ಪ್ರಾರಂಭವಾಗಲಿದೆ. ಏಪ್ರಿಲ್ 18 ರಿಂದ ಮೂರು ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯಲಿದೆ. ಆಯುಶ್, ನ್ಯಾಚುರೋಪತಿ, ಯೋಗ, ಯುನಾನಿ ಕೋರ್ಸ್ ಗಳು ನೀಟ್ ಅಡಿಯಲ್ಲಿ ಬರಲಿದ್ದು, ಸಿಇಟಿ ಕೇವಲ ಇಂಜಿನೀರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ.
ಏಪ್ರಿಲ್ 18ರಂದು ಜೀವವಿಜ್ಞಾನ, ಗಣಿತ, ಏಪ್ರಿಲ್ 19ಕ್ಕೆ ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ಪರೀಕ್ಷೆ ನಡೆಯಲಿದೆ. 20ಕ್ಕೆ ಹೊರರಾಜ್ಯದ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ಇರಲಿದೆ. ಇದೇ ಮೊದಲ ಬಾರಿಗೆ ಪ್ರಶ್ನೆಪತ್ರಿಕೆಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮುದ್ರಿಸಲಾಗಿದೆ.
ರಾಜ್ಯಾದ್ಯಂತ ಒಟ್ಟು 430 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 1,98, 639 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ತೆಗೆದುಕೊಳ್ಳಲಿದ್ದು, 1,00,071 ಪುರುಷ ಮತ್ತು 98,568 ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.