ಸೈಮನ್ ರಾಜ್‍ಗೆ ಹಣ ಕೊಟ್ಟು ಸುಳ್ಳು ಹೇಳಿಸಿದ್ದಾರೆ: ಜಮೀರ್ ಅಹ್ಮದ್ ಆರೋಪ
ಏಪ್ರಿಲ್ 5ರ ರಾತ್ರಿ ನಡೆದ ಘಟನೆ ಕುರಿತು ಖುದ್ದು ಸೈಮನ್ ನೀಡಿರುವ ಹೇಳಿಕೆಯ FIR ಪ್ರತಿಯನ್ನು ಹಿಡಿದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಸೈಮನ್ ರಾಜ್‍ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸಿರುವುದು ನಮಗೇನೂ ಗೊತ್ತಿಲ್ಲ ಅಂತಾ ಅಂದುಕೊಂಡಿದ್ದೀರಾ ರವಿಕುಮಾರ್ ಅವರೇ? ನೀವು ಬಾಯಿಗೆ ಬಂದಂತೆ ಬಣ್ಣ ಹಚ್ಚಿ ಕಥೆ ಹೇಳಿದರೆ ಸತ್ಯ ಎಂದಿಗೂ ಸುಳ್ಳಾಗದು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ರವಿಕುಮಾರ್ ಅವರನ್ನು ಪ್ರಜ್ಞಾವಂತರು, ಅನುಭವಿಗಳು ಎಂದು ಭಾವಿಸಿದ್ದೆ. ಆದರೆ, ಅವರು ಛಲವಾದಿಪಾಳ್ಯದ ಯುವಕ ಚಂದ್ರುವಿನ ಕೊಲೆ ಪ್ರಕರಣಕ್ಕೆ ಇಲ್ಲದ ಕಥೆಗಳನ್ನು ತಳುಕು ಹಾಕಿ ಇಷ್ಟು ಕೀಳುಮಟ್ಟದ ಹೇಳಿಕೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ಪ್ರಕರಣದ ತನಿಖೆ ಮಾಡುವವರು ಪೊಲೀಸರು. ಬಿಜೆಪಿ ಅಥವಾ RSS ಅಲ್ಲ. ಇಂದು ಮನಬಂದಂತೆ ಕೀಳುಮಟ್ಟದ ಹೇಳಿಕೆ ನೀಡಿರುವ MLC ರವಿಕುಮಾರ್ ಅವರೂ ಅಲ್ಲ. ಏಪ್ರಿಲ್ 5ರ ರಾತ್ರಿ ನಡೆದ ಘಟನೆ ಕುರಿತು ಖುದ್ದು ಸೈಮನ್ ನೀಡಿರುವ ಹೇಳಿಕೆಯ FIR ಪ್ರತಿಯನ್ನು ಹಿಡಿದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ‘ಕರ್ನಾಟಕ ನಮ್ಮದು, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ’
ಅಂದು ರಾತ್ರಿ ಛಲವಾದಿಪಾಳ್ಯದ ಮನೆಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡಿದೆವು. ಊಟಕ್ಕಾಗಿ ಚಾಮರಾಜಪೇಟೆ, ಸಿಟಿ ಮಾರ್ಕೆಟ್ ಎಲ್ಲಾ ಕಡೆ ಸುತ್ತಾಡಿದೆವು. ಎಲ್ಲೂ ಊಟ ಸಿಗಲಿಲ್ಲ, ಹೀಗಾಗಿ ಚಿಕನ್ ರೋಲ್ ತಿನ್ನಲು ಗುರದಹಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ನಮ್ಮ ವಾಹನ ಶಾಹೀದ್ ವಾಹನಕ್ಕೆ ಡಿಕ್ಕಿ ಹೊಡೆಯಿತು. ಆಗ ಶಾಹೀದ್ ಮತ್ತು ಚಂದ್ರುವಿನ ನಡುವೆ ಮಾತಿಗೆ ಮಾತು ಬೆಳೆದು ಶಾಹೀದ್ ಚಂದ್ರುವಿನ ತೊಡೆಗೆ ಚುಚ್ಚಿದ. ನನಗೆ ಭಯವಾಗಿ ತಕ್ಷಣ ಅಲ್ಲಿಂದ ಓಡಿ ಹೋದೆ. ಪುನಃ ಬೆಳಗಿನ ಜಾವ 4 ಗಂಟೆಗೆ ವಾಪಸ್ ಬಂದು ನೋಡಿದಾಗ ಚಂದ್ರು ರಕ್ತಸ್ರಾವದಿಂದ ಒದ್ದಾಡುತ್ತಿದ್ದ. ತಕ್ಷಣ ಅವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದೆ. ಆದರೂ ಆತ ಬದುಕುಳಿಯಲಿಲ್ಲವೆಂದು ಖುದ್ದು ಚಂದ್ರುವಿನ ಗೆಳೆಯ ಸೈಮನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಘಟನೆ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೂ ಟ್ವೀಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅಷ್ಟಕ್ಕೂ ಅವರನ್ನು ನೇಮಿಸಿರುವುದು ನಿಮ್ಮ ಬಿಜೆಪಿ ಸರ್ಕಾರವೇ. ಇದೀಗ ನೀವೇ ಅವರ ಮೇಲೆ ಬೆರಳು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯವೆಂದು ಜಮೀರ್ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಕುಮಾರಸ್ವಾಮಿ ರಾಜಕೀಯ ಜೀವನವೇ ಡ್ರಾಮಾ, ಅವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ’
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.