`ಚಾಣಕ್ಯ` ಅಮಿತ್ ಷಾ ಬಂದಾಯ್ತು, `ಚಂದ್ರಗುಪ್ತ` ಮೋದಿ ಬರ್ತಾರೆ : ಕೆ.ಎಸ್.ಈಶ್ವರಪ್ಪ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ: ರಾಜ್ಯಕ್ಕೆ ಚಾಣಕ್ಯ ಅಮಿತ್ ಷಾ ಮಾತ್ರ ಬಂದಿದ್ದಾರೆ. ಆದರೆ ಚಂದ್ರಗುಪ್ತ ನರೇಂದ್ರ ಮೋದಿ ಇನ್ನೂ ಬರುವವರಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಮಠಗಳು ಮತ್ತು ದೇಗುಲಗಳಿಗೆ ಭೇಟಿ ನೀಡುತ್ತಿರುವ ಈಶ್ವರಪ್ಪ, ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಸಮೀಕ್ಷೆಗಳನ್ನು ಬಿಜೆಪಿ ನಂಬುವುದಿಲ್ಲ, ಹಿಂದಿನ ಸಮೀಕ್ಷೆಯನ್ನು ಸುಳ್ಳು ಮಾಡಿ ಬಿಜೆಪಿ ಉತ್ತರ ಭಾರತದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ಚುನಾವಣಾ ಚಾಣಕ್ಯ ರಾಷ್ಟ್ರಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಚಾಣಕ್ಯ ಮಾತ್ರ ಬಂದಿದ್ದಾರೆ. ಇನ್ನೂ ಚಂದ್ರಗುಪ್ತ ನರೇಂದ್ರ ಮೋದಿ ರಾಜ್ಯಕ್ಕೆ ಬರುವವರಿದ್ದಾರೆ. ಅವರಿಬ್ಬರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಸಿಎಂ ಯಡಿಯೂರಪ್ಪ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಟಿಕೆಟ್ ಹಂಚಿಕೆ ನಂತರ ಪಕ್ಷ ಛಿದ್ರವಾಗಲಿದೆ
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಣ್ಣಪುಟ್ಟ ಗೊಂದಲಗಳಿವೆ ನಿಜ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ವ್ಯಕ್ತಿ ನಡೆಯುವಾಗ ಎಡವಿ ಬೀಳುವುದು. ಆದರೆ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆ ನಂತರ, ಪಕ್ಷ ಛಿದ್ರವಾಗಲಿದೆ. ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಯಂತಹ ನಾಯಕರಿಂದ ಹಿಡಿದು ಎಲ್ಲರೂ ಗೊಂದಲದಲ್ಲಿದ್ದಾರೆ. ಹಾಗಾಗಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ಕೂಡಲೇ ಕಾಂಗ್ರೆಸ್'ನಲ್ಲಿ ಭಿನ್ನಮತ ಉಂಟಾಗಿ ಪಕ್ಷದಲ್ಲಿ ಒಡಕು ಉಂಟಾಗಲಿದೆ ಎಂದು ಈಶ್ವರಪ್ಪ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತವನ್ನು ಮರೆಮಾಚಲು ಪ್ರಯತ್ನಿಸಿದರು