ಭಾರೀ ಮಳೆ: 2 ದಿನ ಚಾರ್ಮಾಡಿ ರಸ್ತೆ ಸಂಚಾರ ಬಂದ್
ಭಾರಿ ಮಳೆಯಿಂದಾಗಿ ಚಾರ್ಮಾಡಿಯಲ್ಲಿ ಘಾಟ್ ರಸ್ತೆ ಸಂಚಾರವನ್ನು 2 ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ.
ಮಂಗಳೂರು: ಕಳೆದ ಕೆಲವು ದಿನಗಳಿಂದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಾರ್ಮಾಡಿಯಲ್ಲಿ ಘಾಟ್ ರಸ್ತೆ ಸಂಚಾರವನ್ನು 2 ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ.
ಭಾರಿ ಮಳೆಯಿಂದಾಗಿ ಸೋಮವಾರವಷ್ಟೇ ಗುಡ್ಡ ಕುಸಿದು ರಸ್ತೆ ಸಂಚರಕೆಕ್ ತೀವ್ರ ತಡೆಯುನ್ತಾಗಿತ್ತು. ಆದರೆ ರಸ್ತೆಯ ಮೇಲಿನ ಮಣ್ಣನ್ನು ಮಂಗಳವಾರ ಮಧ್ಯಾಹ್ನದವರೆಗೆ ಅಗ್ನಿಶಾಮಕ ದಳ ಮತ್ತು ಜೆಸಿಬಿ ಸಹಾಯದಿಂದ ತೆರವು ಗೊಳಿಸಿ ರಸ್ತೆಯಲ್ಲಿ ಸುಮಾರು 10 ಗಂಟೆಗಳಿಗೂ ಹೆಚ್ಚು ಕಾಲ ಸಾಲುಗಟ್ಟಿ ನಿಂತಿದ್ದ ವಾಹಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಘಾಟ್‌ನಲ್ಲಿ ಅನ್ನ, ನೀರು ಇಲ್ಲದೆ 3 ಸಾವಿರಕ್ಕೂ ಅಧಿಕ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಇದೀಗ ರಸ್ತೆಯ ಮೇಲಿನ ಮಣ್ಣನ್ನು ತೆರವುಗೊಳಿಸಲಾಗಿದ್ದರೂ, ಮುಂದುವರೆದ ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಚಾರ್ಮಾಡಿ ಘಾಟ್ ರಸ್ತೆಯನ್ನು 2 ದಿನಗಳವರೆಗೆ ಬಂದ್ ಮಾಡಲಾಗಿದೆ.
ಚಾರ್ಮಡಿಯಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿತ; ಪ್ರಯಾಣಿಕರ ಪರದಾಟ
ಅಲ್ಲದೆ, ಇನ್ನೂ ಈ ಭಾಗದಲ್ಲಿ ಜಿಟಿ ಮಳೆ ಮುಂದುವರೆದಿದ್ದು, ರಸ್ತೆ ಬದಿಯ ಮಣ್ಣು ಸಡಿಲಗೊಂಡಿದೆ. ಅಲ್ಲದೆ, ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದು, ಎರಡೂ ಕಡೆಯಿಂದ ವಾಹನಗಳು ಸಂಚರಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮೂಡಿಗೆರೆ-ಮಂಗಳೂರು ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.