ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಪ್ರಾರಂಭವಾಗಲಿದ್ದು, ಮೇ 3ರವರೆಗೆ ಅನ್ವಯವಾಗುವಂತೆ ಸರ್ಕಾರದ ಮಾರ್ಗದರ್ಶನಗಳನ್ನು ಮುಂದುವರೆಸುತ್ತಾ ದಾವಣಗೆರೆ ಜಿಲ್ಲೆಯಾದ್ಯಂತ ಬರುವ ಎಲ್ಲಾ ಮಸೀದಿ, ದರ್ಗಾಗಳಲ್ಲಿ ದೈನಂದಿನ ಮತ್ತು ರಂಜಾನ್ ಮಾಸದ ಸಾಮೂಹಿಕ ಪ್ರಾರ್ಥನೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡಂತೆ ನಿಬಂಧನೆಗಳನ್ನು ವಿಧಿಸಿ ಮೇ 3ರವರೆಗೆ ನಿಷೇಧಿಸಿ ಆದೇಶಿಸಲಾಗಿದೆ.


COMMERCIAL BREAK
SCROLL TO CONTINUE READING

• ಯಾವುದೇ ಮುಸ್ಲಿಂರಿಗೆ ಐದು ಹೊತ್ತಿನ ಪ್ರಾರ್ಥನೆ (ನಮಾಜ್)ಯನ್ನು ಶುಕ್ರವಾರ (ನಮಾಜ್) ಪ್ರಾರ್ಥನೆ ಸಹ ಒಳಗೊಂಡಂತೆ ಮತ್ತು ತರಾವಿ (ನಮಾಜ್) ಪ್ರಾರ್ಥನೆಯನ್ನು ಮಸೀದಿಯಲ್ಲಿ ಮಾಡಲು ನಿರ್ಬಂಧಿಸಲಾಗಿರುತ್ತದೆ.


• ಮಸೀದಿಯ ಸಿಬ್ಬಂದಿಗಳು ಯಾವುದೇ ತರಹದ ಧ್ವನಿವರ್ಧಕಗಳನ್ನು ಮಸೀದಿಯಲ್ಲಿ ಐದು ಹೊತ್ತಿನ ಪ್ರಾರ್ಥನೆ(ನಮಾಜ್) ಯನ್ನು ಶುಕ್ರವಾರ (ನಮಾಜ್) ಪ್ರಾರ್ಥನೆ ಸಹ ಒಳಗೊಂಡಂತೆ ಮತ್ತು ತರ್ಹಾವಿ (ನಮಾಜ್) ಪ್ರಾರ್ಥನೆಗೆ ಬಳಸಲು ನಿರ್ಬಂಧಿಸಲಾಗಿದೆ.


• ಮಸೀದಿಯ ಮೌಜಿನ್ ಅಥವಾ ಪೇಶ್‍ಇಮಾಂ ಸಹರಿ ಮತ್ತು ಇಫ್ತಾರ್ ಸಮಯವನ್ನು ಜನರಿಗೆ ಧ್ವನಿ ಕಡಿಮೆಗೊಳಿಸಿ ತಿಳಿಸಬೇಕು.


• ಯಾವುದೇ ಇಫ್ತಾರ್ ಮತ್ತು ಸಹರಿಗಳಲ್ಲಿ ಸಾಮೂಹಿಕ ಭೋಜನಕೂಟ ಮಸೀದಿಗಳಲ್ಲಿ ಆಯೋಜಿಸುವಂತಿಲ್ಲ


• ಮಸೀದಿ ಆವರಣದಲ್ಲಿ ಗಂಜಿ, ಆಶ್, ತಂಪುಪಾನೀಯಗಳನ್ನು ತಯಾರಿಸುವಂತಿಲ್ಲ.


• ಮಸೀದಿಗಳ ಸುತ್ತಮುತ್ತ ಯಾವುದೇ ಉಪಹಾರ ಅಂಗಡಿ ಹಾಕುವುದನ್ನು ನಿಷೇಧಿಸಲಾಗಿದೆ.


ಮಸೀದಿ ದರ್ಗಾಗಳ ವ್ಯವಸ್ಥಾಪನ ಕಮಿಟಿಯವರು ಮೇಲ್ಕಂಡ ನಿಬಂಧನೆಗಳನ್ನು ಸಾರ್ವಜನಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 (Covid-19)  ಕೊರೊನಾವೈರಸ್ ಸೋಂಕು ಹರಡದಂತೆ ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಈ ಹಿಂದೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೀಡಿರುವ ಆದೇಶಗಳನ್ನು ಜಾರಿಗೊಳಿಸಲು ನಿರ್ದೇಶಿಸಿರುತ್ತಾರೆ. ತಪ್ಪಿದಲ್ಲಿ ವಕ್ಫ್ ಕಾಯಿದೆ 1995 ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿರುತ್ತಾರೆ.


ದಾವಣಗೆರೆ ಜಿಲ್ಲಾದ್ಯಂತ ಬರುವ ಎಲ್ಲಾ ಮಸೀದಿ/ದರ್ಗಾಗಳ ವ್ಯವಸ್ಥಾಪನ ಕಮಿಟಿಯವರು ಮೇಲ್ಕಂಡ ಆದೇಶದಲ್ಲಿ ನೀಡಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪವಿತ್ರ ರಂಜಾನ್ ಮಾಸಾಚರಣೆಯನ್ನು ಅತ್ಯಂತ ಶಾಂತಿಯಿಂದ ಆಚರಿಸಲು ದಾವಣಗೆರೆ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ‌ ಮಹಮ್ಮದ್ ಸಿರಾಜ್ ಸಹ ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.