ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಡ್ಗಿಚ್ಚಿನಿಂದ ತತ್ತರಿಸಿರುವ ಬಂಡೀಪುರ ಹಾಗೂ ಹಿಮವತ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದ ವೈಮಾನಿಕ ಸಮೀಕ್ಷೆಯನ್ನು ಬುಧವಾರ ನಡೆಸಿದರು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಕಾಡ್ಗಿಚ್ಚಿಗೆ ಆಹುತಿಯಾದ ಪ್ರದೇಶಗಳನ್ನು ವೀಕ್ಷಿಸಿ, ಅರಣ್ಯ ನಷ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 


ಕಳೆದ ಐದಾರು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು, ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದವರೆಗೂ ಹಬ್ಬಿದ್ದು, 10 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಮಂಗಳವಾರವೂ ಸಹ ಸೇನಾ ಹೆಲಿಕಾಪ್ಟರ್ ಗಳು ಏಳು ಸುತ್ತು ಕಾರ್ಯಾಚರಣೆ ನಡೆಸಿದ್ದು, ಹೊತ್ತಿ ಉರಿಯುತ್ತಿರುವ ಕೇರಳ ಹಾಗೂ ತಮಿಳುನಾಡು ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ನೀರು ಸುರಿದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.


ಸತತ ಒಂದು ವಾರದಿಂದ ಬೆಂಕಿಯಲ್ಲಿ ಬೆಂದು ಹೋಗಿದ್ದ ಗೋಪಾಲಸ್ವಾಮಿ ಬೆಟ್ಟದ ವಲಯ ಸಂಪೂರ್ಣ ಸುಟ್ಟು ಹೋಗಿದೆ. ಅಲ್ಲದೆ, ಬೆಂಕಿ ನಂದಿಸುವ ಕಾರ್ಯದಲ್ಲಿ ನೂರಾರು ಸ್ವಯಂ ಸೇವಕರೂ ಪಾಲ್ಗೊಂಡಿದ್ದು, ಅರಣ್ಯ ಸಿಬ್ಬಂದಿಗೆ ಸಾಥ್ ನೀಡಿದ್ದಾರೆ. 


ಏತನ್ಮಧ್ಯೆ, ಅರಣ್ಯ ಇಲಾಖೆಗೆ ಉತ್ತಮ ಆದಾಯ ತಂದುಕೊಡುತ್ತಿದ್ದ ಬಂಡೀಪುರದ ಸಫಾರಿ ವಲಯ ಕೂಡ ಬೆಂಕಿಯಿಂದ ಸುಟ್ಟುಹೋಗಿದ್ದು, ಒಂದು ವಾರಗಳ ಕಾಲ ಸಫಾರಿಯನ್ನೂ ಸಹ ನಿಷೇಧ ಮಾಡಲಾಗಿದೆ.