ಕೇಂದ್ರ ಬಜೆಟ್ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಚೊಚ್ಚಲ ಬಜೆಟ್ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾಗಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಚೊಚ್ಚಲ ಬಜೆಟ್ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾಗಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರೈತ ಉತ್ಪಾದಕ ಸಂಘಗಳ ಸ್ಥಾಪನೆಗೆ ಒತ್ತು, ಎಪಿಎಂಸಿಗಳಲ್ಲಿ ಆನ್ ಲೈನ್ ಮಾರುಕಟ್ಟೆ ಬಲಪಡಿಸುವ ಕಾರ್ಯಕ್ರಮ ಹಾಗೂ ಗ್ರಾಮೀಣ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕೇಂದ್ರದ ಯೋಜನೆಗಳು ಸ್ವಾಗತಾರ್ಹ. ಆದರೆ ರೈತರ ಆತ್ಮಸ್ಥೈರ್ಯ ಹೆಚ್ಚಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದರೆ ಚೆನ್ನಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಎಸ್ಟಿ ತೆರಿಗೆಯಲ್ಲಿ ರಾಜ್ಯದ ಪಾಲಿನ ಮೊತ್ತ ಕಡಿಮೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಪಾಲಿನಲ್ಲಿ ಸುಮಾರು 1600 ಕೋಟಿ ರೂ. ಗಳಷ್ಟು ಕೊರತೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದರಿಂದ ರಾಜ್ಯಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಪೆಟ್ರೋಲ್, ಡೀಸೆಲ್ ಗಳ ಮೇಲೆ ಸೆಸ್ ಏರಿಕೆ ಮಾಡಿರುವುದರಿಂದ ರಾಜ್ಯವು ಇಂಧನ ಮೇಲೆ ಸೆಸ್ ವಿಧಿಸಲು ಅವಕಾಶ ಕಡಿಮೆ ಮಾಡಿದಂತಾಗಿದೆ. ಅಲ್ಲದೆ, ಇಂಧನ ಬೆಲೆ ಏರಿಕೆಯಿಂದ ಪ್ರತಿಯೊಬ್ಬರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೊರೆಯಾಗಲಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ರೈಲ್ವೆ ಯೋಜನೆಗಳಿಗೆ ಅದರಲ್ಲೂ ಸಬರ್ಬನ್ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಕೊಡುಗೆ ನೀಡುವರೆಂದು ನಿರೀಕ್ಷಿಸಿದ್ದೆ. ಈ ನಿಟ್ಟಿನಲ್ಲಿ ಯಾವುದೇ ಘೋಷಣೆ ಮಾಡದಿರುವುದು ನಿರಾಶೆ ತಂದಿದೆ ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.