ನವದೆಹಲಿ: ಪ್ರಕೃತಿ ವಿಕೋಪ ಪರಿಹಾರ ಹಾಗೂ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಇರುವ ವೇತನ ಮತ್ತು ಸಾಮಗ್ರಿ ವೆಚ್ಚದ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ ಅವರು,  ಭಾರತ ಸರ್ಕಾರಕ್ಕೆ ರಾಜ್ಯವು ಪ್ರಸ್ತಾವನೆ ಸಲ್ಲಿಸಿರುವಂತೆ ಬರ ಪರಿಹಾರ ಹಾಗೂ ನಿರ್ವಹಣೆಗೆ ಎಸ್‍ಡಿಆರ್‍ಎಫ್/ ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಅಗತ್ಯವಿರುವ 2064.30 ಕೋಟಿ ರೂ. ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.


ಸತತ ಬರಗಾಲ, ಅನಿಶ್ಚಿತ ಮಳೆಯ ಪರಿಣಾಮವಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕಾದ್ದು ಅತಿ ಅಗತ್ಯವಾದ್ದರಿಂದ ಕೂಡಲೇ ಈ ಅನುದಾನ ಬಿಡುಗಡೆ ಮಾಡುವಂತೆ ಅವರು ಕೋರಿದರು.



2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹ, ಭೂಕುಸಿತ ಪರಿಸ್ಥಿತಿ ಹಾಗೂ ಬರ ಪರಿಸ್ಥಿತಿಗಳೆರಡನ್ನೂ ರಾಜ್ಯ ಎದುರಿಸಿದ್ದು, ಕೊಡಗು ಮತ್ತು ಸಮೀಪದ ಮಲೆನಾಡು ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಭೂ ಕುಸಿತದಿಂದ ತೀವ್ರ ಹಾನಿ ಸಂಭವಿಸಿತ್ತು. ಅಲ್ಲದೆ  ರಾಜ್ಯದ 100 ತಾಲ್ಲೂಕುಗಳಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತಲೆದೋರಿತ್ತು.


ಇದಕ್ಕೆ ಎಸ್‍ಡಿಆರ್‍ಎಫ್/ ಎನ್‍ಡಿಆರ್‍ಎಫ್ ಮಾರ್ಗಸೂಚಿಗಳ ಪ್ರಕಾರ 2434 ಕೋಟಿ ರೂ. ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಈ ಮೊತ್ತದ ಕೇವಲ ಶೇ. 50 ಕ್ಕೂ ಕಡಿಮೆ ಅಂದರೆ 949.49 ಕೋಟಿ ರೂ. ಪರಿಹಾರ ಮಂಜೂರು ಮಾಡಿತ್ತು. ಇದೀಗ ಉಳಿದ ಅನುದಾನವನ್ನು ಬಿಡುಗಡೆ ಮಾಡುವಂತೆ ಸಿಮೆ ಮನವಿ ಸಲ್ಲಿಸಿದ್ದಾರೆ.