ಬೆಂಗಳೂರು: ಗೋವಾದ ಬೈನಾ ಬೀಚ್ನಲ್ಲಿ ಕನ್ನಡಿಗರು ವಾಸಿಸುತ್ತಿದ್ದ ಮನೆಗಳನ್ನು ನೆಲಸಮ ಮಾಡಿರುವ ಅಲ್ಲಿಯ ಸರ್ಕಾರದ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗೋವಾ ಸರ್ಕಾರ ಪದೇ ಪದೇ ಕನ್ನಡಿಗರ ಮೇಲೆ ಈ ರೀತಿಯ ವರ್ತನೆ ತೋರುವುದು ಸರಿಯಲ್ಲ. ಯಾವುದೇ ರಾಜ್ಯದಲ್ಲಿ ಹಲವಾರು ಭಾಷಿಕರು ವಾಸ ಮಾಡುತ್ತಾರೆ. ಗೋವಾದಲ್ಲಿ ಕನ್ನಡಿಗರು, ಕರ್ನಾಟಕದಲ್ಲಿ ಗೋವಾ, ತಮಿಳುನಾಡು, ಆಂಧ್ರದವರು ಇದ್ದಾರೆ. ಅವರೆಲ್ಲರಿಗೂ ರಕ್ಷಣೆ ಕೊಡಬೇಕಾದ್ದು ಯಾವುದೇ ಸರ್ಕಾರದ ಜವಾಬ್ದಾರಿ ಎಂದರು.


ಗೋವಾದಲ್ಲಿ ವಾಸ ಮಾಡುತ್ತಿದ್ದ ಕನ್ನಡಿಗರು ಕಾನೂನು ಉಲ್ಲಂಘಿಸಿ ಮನೆಗಳನ್ನು ಕಟ್ಟಿಕೊಂಡಿದ್ದರೆ ಕ್ರಮ ಕೈಗೊಳ್ಳಲಿ. ಆದರೆ, ಮನೆಗಳನ್ನು ಕೆಡವಿದ ಬಳಿಕ ಅವರಿಗೆ ಮರು ವಸತಿ ಸೌಕರ್ಯ ಕಲ್ಪಿಸಬೇಕಿತ್ತು. ಕೂಡಲೇ ಸರ್ಕಾರ ಆ ಕೆಲಸ ಮಾಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಸಾಮರಸ್ಯ ಉಳಿಯಬೇಕಾದರೆ ರಾಜ್ಯ, ರಾಜ್ಯಗಳ ನಡುವೆ ಪರಸ್ಪರ ಸಹಕಾರ, ಸಹಾಯ ಇರಬೇಕು. ಆಗ ಮಾತ್ರ ಆ ವ್ಯವಸ್ಥೆ ಉಳಿಯಲು ಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಗೋವಾ ನಡೆದುಕೊಳ್ಳಬೇಕು. ಈ ಕುರಿತು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ದೂರವಾಣಿ ಮೂಲಕವೂ ಮಾತುಕತೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.