ಬೆಂಗಳೂರು:  ಕನ್ನಡದ ಹಿರಿಯ ಸಾಹಿತಿ, ಕವಿ ಕೆ.ಎಸ್. ನಿಸಾರ್ ಅಹಮದ್ ಅವರ  ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

COMMERCIAL BREAK
SCROLL TO CONTINUE READING

ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದ ಅವರು, ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತಿ ಪಡೆದು ಕನ್ನಡಿಗರ ಮನೆಮಾತಾಗಿದ್ದರು. ಶಿವಮೊಗ್ಗದಲ್ಲಿ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು ಹಾಗೂ ವಿಶೇಷ ಬಾಂಧವ್ಯ ಹೊಂದಿದ್ದರು.‌ 2007ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು.  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಕನ್ನಡದ ಎಲ್ಲ ಪ್ರಾಕಾರಗಳನ್ನು ಶ್ರೀಮಂತಗೊಳಿಸಿದ್ದರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿಬಿದ್ದಂತಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.



ಸ್ಪೀಕರ್ ಸಂತಾಪ
ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿದ್ದ ಪ್ರೊ.ನಿಸಾರ್ ಅಹಮದ್ ಅವರ ಅಗಲಿಕೆಯಿಂದ, ಕನ್ನಡ ನಾಡಿನ ಒಬ್ಬ ಶ್ರೇಷ್ಟ ಕವಿ, ವಿಮರ್ಶಕ ಮತ್ತು ವೈಚಾರಿಕ ಬರಹಗಾರರನ್ನು ಕಳೆದುಕೊಂಡು, ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿದ ಆತ್ಮಕ್ಕೆ, ಭಗವಂತನು ಚಿರಶಾಂತಿ ದಯಪಾಲಿಸಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.


ಕನ್ನಡ ಪ್ರಾಧಿಕಾರದ ಸಂತಾಪ
ರಾಜಕಾರಣಿಗಳು ಸೇರಿದಂತೆ ಎಲ್ಲರನ್ನೂ ತಮ್ಮ ಸಾಹಿತ್ಯದ ಮೂಲಕವೇ ಎಚ್ಚರಿಸುತ್ತಿದ್ದ ನಾಡಿನ ಶ್ರೇಷ್ಠ ಕವಿ, ನಾಡೋಜ, ಪದ್ಮಶ್ರೀ, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ. ಇಂಥ ಸಾಹಿತಿಗಳ ಸೇವೆ ಈ ನಾಡಿಗೆ ಇನ್ನೂ ಅಗತ್ಯವಿತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.


ನಾಡು-ನುಡಿಯ ಬಗ್ಗೆ ಈಗಿನ ಜನರ ಶೂನ್ಯತೆ ಕುರಿತಾಗಿ ಬೇಸರ ವ್ಯಕ್ತಪಡಿಸುತ್ತಿದ್ದ  ನಿಸಾರ್ ಅಹಮದ್ ಅವರು,  14 ಕವನ ಸಂಕಲನ, 10 ಗದ್ಯಕೃತಿಗಳು, ಐದು ಮಕ್ಕಳ ಸಾಹಿತ್ಯ ಗ್ರಂಥಗಳು,  ಅನುವಾದ ಗ್ರಂಥ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳ ಹಲವಾರು ಕೃತಿಗಳು ಅವರ ಬರವಣಿಗೆ ಮೂಸೆಯಿಂದ ಮೂಡಿವೆ. ಇವರ ಹಲವಾರು ಕವಿತೆಗಳು ಹಿಂದಿ, ಇಂಗ್ಲಿಷ್, ಉರ್ದು,  ಮಲಯಾಳಂ,  ತೆಲುಗು, ತಮಿಳು, ಚೀನಿ ಮುಂತಾದ ಭಾಷೆಗಳಿಗೆ ಅನುವಾದಗೊಂಡಿರುವುದು ಅವರ ಸಾಹಿತ್ಯ ಪ್ರೌಢಿಮೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ.


ಇಂತಹ ಮೇರು ವ್ಯಕ್ತಿತ್ವದ ನಿಸಾರ್ ಅಹಮದ್ ಅವರಿಗೆ ವಿಶ್ವಮಾನವ ಪ್ರಶಸ್ತಿ ಪ್ರಶಸ್ತಿ, ವಿಕೃ ಗೋಕಾಕ್ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳು ಸಂದಿವೆ.  73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಕೂಡ ಒಲಿದುಬಂದಿತ್ತು. ಆ ಸಂದರ್ಭದಲ್ಲಿ ನಮ್ಮ ನಾಡಿನ ಆಚಾರ-ವಿಚಾರಗಳಿಗೆ ತಕ್ಕಂತೆ ನಡೆದುಕೊಂಡಿದ್ದನ್ನ ಸ್ಮರಿಸಬಹುದು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸಾಕಷ್ಟು ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಅವರ ನಿಧನದ ಸುದ್ದಿ ನೋವಿನ ಸಂಗತಿಯಾಗಿದ್ದು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಆ ದೇವರು ಕರುಣಿಸಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.


ಸವದಿ ಸಂತಾಪ
ಕನ್ನಡದ ನಿತ್ಯೋತ್ಸವದ ಕವಿ ಎಂದೆ ಪ್ರಸಿದ್ಧರಾಗಿದ್ದ ಡಾ. ನಿಸಾರ್ ಅಹಮದ್ ಅವರು ನಿಧನರಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ಸಾಂಸ್ಕೃತಿಕ ಜಗತ್ತಿಗೆ ನಿಜಕ್ಕೂ ತುಂಬಲಾರದ ನಷ್ಟವಾಗಿದೆ. ಕನ್ನಡದ ಸೊಗಡನ್ನು ಅತ್ಯಂತ ಸಮರ್ಥವಾಗಿ ಕಾವ್ಯದ ಸೊಬಗಿನಲ್ಲಿ ಕಟ್ಟಿಕೊಡುತ್ತಿದ್ದ ಡಾ. ನಿಸಾರ್ ಅಹಮದ್ ಅವರು, ನಮಗೆಲ್ಲಾ ಕನ್ನಡದ ಪ್ರೀತಿ ಮತ್ತು ಶ್ರದ್ಧೆಯ ಬಗ್ಗೆ ಸ್ಪೂರ್ತಿ ತುಂಬುತ್ತಿದ್ದ ಶಕ್ತಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೂ ಮತ್ತು ಅವರ ಅಭಿಮಾನಿಗಳಿಗೂ ನನ್ನ ಸಾಂತ್ವನಗಳು. ಡಾ.ನಿಸಾರ್ ಅಹಮದ್ ಅವರು ನಮ್ಮನ್ನು ಬಿಟ್ಟು ಹೋದರೂ ಅವರು ತಮ್ಮ ಕಾವ್ಯದ ಮೂಲಕ ನಮ್ಮಲ್ಲಿ ಶಾಶ್ವತವಾಗಿ ಇರುತ್ತಾರೆ ಎಂದು ಉಪ ಮುಖ್ಯಮಂತ್ರಿಗ ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದಾರೆ.


ಜಾರಕಿಹೊಳಿ ಕಂಬನಿ
ಕನ್ನಡದ ಹಿರಿಯ ಕವಿಗಳು, ಕನ್ನಡ ಸುಗಮ ಸಂಗೀತದ ಮೇರು ವ್ಯಕ್ತಿತ್ವವಾಗಿದ್ದ ಡಾ ನಿಸಾರ್ ಅಹಮದ್ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಸಂವೇದನಾಶೀಲ ಕವಿಗಳಾಗಿದ್ದ ಇವರು ಭಾವೈಕ್ಯದ ದ್ಯೋತಕವಾಗಿದ್ದರು. ಇವರ 'ನಿತ್ಯೋತ್ಸವ' ಕನ್ನಡಿಗರ ಮನೆಮಾತಾಗಿದೆ. ಇವರ ಬರಹಗಳು ಪಠ್ಯಗಳಾಗಿವೆ. ಇವರು ಶ್ರೇಷ್ಠ ಅನುವಾದಕರೂ ಆಗಿದ್ದರು. ಈ ಶತಮಾನ ಕಂಡ ಶ್ರೇಷ್ಠ ಕನ್ನಡ ಕವಿ ನಿಸಾರ್ ಅಹಮದ್ ಅವರು ನಾಡೋಜ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇವರ ಅಪಾರ ಅಭಿಮಾನಿಗಳಿಗೆ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಇವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಮತ್ತು ನಿಸಾರ್ ಅಹಮದ್ ಅವರು ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕಂಬನಿ ಮಿಡಿದಿದ್ದಾರೆ.