ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ ಮುಖಾಂತರ ರೈತರಿಂದ ನೇರವಾಗಿ 2 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳವನ್ನು ಖರೀದಿಸಲು ಕೂಡಲೇ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು.


COMMERCIAL BREAK
SCROLL TO CONTINUE READING

ಗುರುವಾರ ಅವರ ಅಧ್ಯಕ್ಷತೆಯಲ್ಲಿ ಮೆಕ್ಕೆ ಜೋಳ ಮತ್ತು ಅಕ್ಕಿಗೆ ಬೆಂಬಲ ಬೆಲೆ ನಿಗದಿಪಡಿಸುವ ಕುರಿತ ಸಭೆಯಲ್ಲಿ ಮಾತನಾಡಿದ ಅವರು ಪ್ರತಿ ಕ್ವಿಂಟಾಲ್ ಮೆಕ್ಕೆ ಜೋಳಕ್ಕೆ 1300 ರೂ.ಗಳಂತೆ ಖರೀದಿಸಲು ಕರ್ನಾಟಕ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಸೂಚಿಸಿದರು.


ಈ ಬಾರಿ 54 ಲಕ್ಷ ಟನ್ ಮೆಕ್ಕೆ ಜೋಳದ ಇಳುವರಿಯನ್ನು ನಿರೀಕ್ಷಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ಕುಮಾರಸ್ವಾಮಿ ಮದ್ಯವರ್ತಿಗಳ ಹಾವಳಿಯನ್ನು ಈ ಕ್ರಮದಿಂದ ತಪ್ಪಿಸಬಹುದು ಎಂದರು. 


ಇದಕ್ಕಾಗಿ 50 ಕೋಟಿ ರೂ.ಗಳ ನೆರವನ್ನು ಆರ್ಥಿಕ ಇಲಾಖೆಯಿಂದ ಪಡೆಯುವಂತೆ  ಸೂಚನೆ ನೀಡಿದ ಸಿಎಂ ಪ್ರತಿ ಕ್ವಿಂಟಾಲ್ ಗೆ  ರೂ.1750 ಗಳಂತೆ ಅಕ್ಕಿಯನ್ನೂ  ಖರೀದಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 


ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಪಶುಸಂಗೋಪನೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ, ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್ ಪ್ರಸಾದ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರರಾದ ಸುಬ್ರಮಣ್ಯಂ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.