ಮಕ್ಕಳ ಕಳ್ಳರ ಹಾವಳಿ ಹಿನ್ನೆಲೆ, ಅಪರಿಚಿತ ವ್ಯಕ್ತಿಯ ಕೊಲೆ
ರಾಜ್ಯದ ಜನರನ್ನು ತಲ್ಲಣಗೊಳಿಸಿರೋ ಮಕ್ಕಳ ಕಳ್ಳರ ಹಾವಳಿ ಹಿನ್ನಲೆಯಲ್ಲಿ ಸಾರ್ವಜನಿಕರು ಅಪರಿಚಿತ ಯುವಕನೊಬ್ಬನನ್ನು ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ರಾಜ್ಯದ ಜನರನ್ನು ತಲ್ಲಣಗೊಳಿಸಿರೋ ಮಕ್ಕಳ ಕಳ್ಳರ ಹಾವಳಿ ಹಿನ್ನಲೆಯಲ್ಲಿ ಸಾರ್ವಜನಿಕರು ಅಪರಿಚಿತ ಯುವನೋರ್ವನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಂದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಕೆಲಸ ಹುಡುಕಿಕೊಂಡು ಬಂದಿದ್ದ ರಾಜಸ್ಥಾನ ಮೂಲದ ಯುವಕನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಮನಬಂದಂತೆ ಥಳಿಸಿ ಕೊಂದಿರುವ ಘಟನೆ ಚಾಮರಾಜಪೇಟೆಯ ಪೆನ್‌ಷನ್ ಮೊಹಲ್ಲಾದ ರಸ್ತೆಯಲ್ಲಿ ಬುಧವಾರ ನಡೆದಿದೆ. ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಆತನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಬೆನ್ನಟ್ಟಿದ್ದ ಸಾರ್ವಜನಿಕರು, ರಂಗನಾಥ್ ಟಾಕೀಸ್ ಬಳಿ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಾಲುರಾಮ್ ಬಚ್ಚನ್‌ರಾಮ್ (26) ಕೊಲೆಯಾದ ಯುವಕ. ರಾಜಸ್ಥಾನದ ನಿವಾಸಿಯಾಗಿದ್ದ ಅವರು, ಉದ್ಯೋಗ ಹುಡುಕಿಕೊಂಡು ಕೆಲ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರ ಸಂಬಂಧಿಕರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ಆತನ ಮೇಲೆ ಹಲ್ಲೆ ಮಾಡಿದ ಸಾರ್ವಜನಿಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.