ಕಲಬುರ್ಗಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಅವರ ನಾಲಿಗೆಯನ್ನು ಒಂದು ತಿಂಗಳೊಳಗೆ ಕತ್ತರಿಸಿ ತಂದರೆ 1ಕೋಟಿ ರೂ. ನಗದು ಬಹುಮಾನ ನೀಡಲಾಗುವುದು' ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಸವಾಲು ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು "ಅಪ್ಪ-ಅಮ್ಮ ಯಾರೆಂಬುದು ಗೊತ್ತಿಲ್ಲದವರು ಜಾತ್ಯಾತೀತರು" ಎಂಬ ಹೇಳಿಕೆಯನ್ನು ನೀಡಿದ್ದು ಇದು ತೀವ್ರ ವಿವಾದವನ್ನು ಹುಟ್ಟುಹಾಕಿತ್ತು.


ಕಲಬುರ್ಗಿಯಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಪಟ್ಟೇದಾರ "ಸಚಿವರು ಸಂವಿಧಾನದ ಜಾತ್ಯತೀತ ಪದಕ್ಕೆ ಚ್ಯುತಿ ತರುವ ಹೇಳಿಕೆ ನೀಡಿದ್ದಾರೆ. ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕಿತ್ತು ಹಾಕಬೇಕು. ದೇಶದ ಎಲ್ಲ ಜನರು ಶಾಂತಿಯಿಂದ ಬದುಕುತ್ತಿದ್ದಾರೆ. ಆದರೆ ಕೇಂದ್ರ ಮಂತ್ರಿಗಳಾದ ಅನಂತಕುಮಾರ್ ಹೆಗ್ಡೆ ತಮ್ಮ ಹೇಳಿಕೆಗಳ ಮೂಲಕ ಜಾತ್ಯಾತೀತರಿಗೆ ಅವಮಾನ ಮಾಡಿದ್ದಾರೆ. ಭಾರತೀಯ ಸಂವಿಧಾನವನ್ನು ವಿರೋಧಿಸುವವರು ದೇಶದ್ರೋಹಿಗಳೆನಿಸುತ್ತಾರೆ. ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕಿತ್ತು ಹಾಕಬೇಕು" ಎಂದು ಪಟ್ಟೇದಾರ ಆಗ್ರಹಿಸಿದ್ದಾರೆ. 


ಮತ್ತೊಂದೆಡೆ, "ಜಾತ್ಯಾತೀತರಿಗೆ ಅಪ್ಪ ಅಮ್ಮ ಯಾರೆಂದೂ ಗೊತ್ತಿಲ್ಲ" ಎಂದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದ್ದಾರೆ. ಈ ಸಂಬಂಧ ಕಾನೂನು ಸಲಹೆಗಾರರೊಡನೆ ಚರ್ಚೆ ನಡೆದಿದೆ. ಶೀಘ್ರದಲ್ಲಿ ಮೊಕದ್ದಮೆ ದಾಖಲಾಗಲಿದೆ ಎಂದು ಅವರು ಹೇಳಿದ್ದಾರೆ.