15ದಿನಗಳಲ್ಲಿ ಗುಂಡಿ ಮುಚ್ಚಿ: ಸಿಎಂ ಸಿದ್ದರಾಮಯ್ಯ
ಬಿಬಿಎಂಪಿ ಅಧಿಕಾರಿಗಳಿಗೆ ಗಡುವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಎಲ್ಲಾ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಹದಿನೈದು ದಿನಗಳ ಗಡುವು ನೀಡಿದ್ದಾರೆ.
ರಸ್ತೆ ಗುಂಡಿ ಪರಿಣಾಮ ವಾಹನ ಸವಾರರು ಮೃತ ಮಟ್ಟಿರುವ ಪ್ರದೇಶವಾದ ನಾಯಂಡಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿಯವರು ಸ್ಥಳದಲ್ಲೇ ಇದ್ದ ಬಿಬಿಎಂಪಿ ಆಯುಕ್ತರಿಗೆ ಈ ಆದೇಶ ನೀಡಿದರು. ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೂ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಈ ರೀತಿಯ ಮಳೆ ಹಿಂದೆಂದೂ ಆಗಿರಲಿಲ್ಲ. ಹೀಗಾಗಿ ರಸ್ತೆಗಳು ಗುಂಡಿಮಯ ಆಗಿವೆ. ರಸ್ತೆ ಗುಂಡಿಯಿಂದಾಗಿ ವಾಹನ ಸವಾರರು ಮೃತಪಟ್ಟಿರುವುದು ದುರ್ದೈವದ ಸಂಗತಿ. ಮೃತರಿಗೆ ನಾನು ಸಂತಾಪ ಸೂ ಚಿಸುತ್ತೇನೆ. ಅವರ ಕುಟುಂಬದವರಿಗೆ ಪರಿಹಾರ ನೀಡಲೂ ಹೇಳಿದ್ದೇನೆ. ನಿತ್ಯವೂ ಮಳೆ ಆಗುತ್ತಿರುವ್ಯದರಿಂದ ಗುಂಡಿಗಳನ್ನು ಮುಚ್ಚುವಲ್ಲಿ ವಿಳಂಬವಾಗಿದೆ. ಮಳೆಯಲ್ಲಿ ಗುಂಡಿ ಮುಚ್ಚಿದರೂ ಡಾಂಬರು ನಿಲ್ಲುವುದಿಲ್ಲ. ಮಳೆಯಲ್ಲೂ ಗುಂಡಿಗಳನ್ನು ಮುಚ್ಚುವಂತಹ ತಂತ್ರಜ್ಞಾನ ನಮ್ಮಲ್ಲಿ ಇಲ್ಲ. ಆದರೂ 15 ದಿನದಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮೆಟ್ರೋ ರೈಲು ನಿಗಮದ ವ್ಯವಸ್ಥಾಪದ ನಿರ್ದೇಶಕರಿಗೆ ತಿಳಿಸಿದ್ದೇನೆ. ಬೆಂಗಳೂರು ಮಹಾನಗರದ ಎಲ್ಲ ರಸ್ತೆಗಳಿಗೂ ವೈಟ ಟಾಪಿಂಗ್ ಮಾಡುವ ಉದ್ದೇಶವಿದೆ. ಸಂಪನ್ಮೂಲ ಕೊರತೆ ಪರಿಣಾಮ ಏಕ ಕಾಲಕ್ಕೆ ಎಲ್ಲ ರಸ್ತೆಗಳಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.