ನವೆಂಬರ್ ಅಂತ್ಯದೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಿ, ಇಲ್ಲವೇ ಕಡ್ಡಾಯ ರಜೆ ಮೇಲೆ ತೆರಳಿ: ಗೋವಿಂದ ಎಂ ಕಾರಜೋಳ
ರಾಜ್ಯದಲ್ಲಿ ಸಂಭವಿಸಿದ ನೆರೆ ಹಾವಳಿ, ಭೀಕರ ಮಳೆಯಿಂದ ರಸ್ತೆಗಳು ದುರಸ್ಥಿಗೆ ಬಂದಿದ್ದು, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಪಾರದರ್ಶಕ ಕಾಯ್ದೆಯ ವಿನಾಯಿತಿಯನ್ನು ನೀಡಲಾಗಿದೆ. ಯಾವುದೇ ನೆಪಹೇಳದೇ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈ ಕಾಮಗಾರಿಗಳ ಕುರಿತು ವಾರಕ್ಕೊಂದು ಬಾರಿ ವರದಿ ಸಲ್ಲಿಸಬೇಕು.
ಬೆಂಗಳೂರು: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಎಲ್ಲಾ ರಸ್ತೆಗಳ ಗುಂಡಿ ಮಚ್ಚುವ ಕೆಲಸವನ್ನು ನವೆಂಬರ್ 30 ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಇಂಜಿನಿಯರ್‌ಗಳ ಕಾರ್ಯನಿರ್ವಹಣ ವರದಿ( ಸಿಆರ್) ಯಲ್ಲಿ ಅವರ ಅಸಾಮರ್ಥ್ಯತೆ ಕುರಿತು ನಮೂದಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸೂಚಿಸಿದರು.
ವಿಕಾಸಸೌಧದಲ್ಲಿಂದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಯೋಜನೆಗಳ ಪ್ರಗತಿ, ಅಪೆಂಡಿಕ್ಸ್ ಇ, ರಸ್ತೆ ಮತ್ತು ಸೇತುವೆ, ಕಟ್ಟಡ ಮುಂದುವರೆದ ಹಾಗೂ ಹೊಸ ರಸ್ತೆ ಮತ್ತು ಸೇತುವೆ ಕಾಮಗಾರಿಗಳ ಕುರಿತು ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಭವಿಸಿದ ನೆರೆ ಹಾವಳಿ, ಭೀಕರ ಮಳೆಯಿಂದ ರಸ್ತೆಗಳು ದುರಸ್ಥಿಗೆ ಬಂದಿದ್ದು, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಪಾರದರ್ಶಕ ಕಾಯ್ದೆಯ ವಿನಾಯಿತಿಯನ್ನು ನೀಡಲಾಗಿದೆ. ಯಾವುದೇ ನೆಪಹೇಳದೇ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈ ಕಾಮಗಾರಿಗಳ ಕುರಿತು ವಾರಕ್ಕೊಂದು ಬಾರಿ ವರದಿ ಸಲ್ಲಿಸಬೇಕು. ವರದಿ ನೀಡದಿದ್ದವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗುವುದು. ಯಾವುದೇ ಇಂಜಿನಿಯರ್‌ಗಳ ವರ್ಗಾವಣೆ, ಕಡ್ಡಾಯ ರಜೆ ಮೇಲೆ ಕಳುಹಿಸುವ ಪ್ರಸ್ತಾವನೆಯಲ್ಲಿ ಕಾರಣವನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚಿಸಿದರು.
ಮಾರ್ಚ್ ಅಂತ್ಯದೊಳಗೆ ಎಲ್ಲಾ ಯೋಜನಾ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು. ಕಟ್ಟಡ ನಿರ್ಮಾಣ ಯೋಜನೆಯಡಿ 1500 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. 800 ಕೋಟಿ ರೂ. ವೆಚ್ಚದ ನ್ಯಾಯಾಲಯ ಕಟ್ಟಡ ಕಾಮಗಾರಿಗಳೂ ಪ್ರಗತಿಯ ಹಂತದಲ್ಲಿವೆ. ನ್ಯಾಯಾಲಯ ಕಟ್ಟಡ ನಿರ್ಮಾಣ ಕುರಿತ ಪ್ರಸ್ತಾವನೆಗಳು ಬಂದಿವೆ. 50 ಇಲಾಖೆಗಳಿಗೆ ಪ್ರತ್ಯೇಕ ಬಜೆಟ್ ಹಂಚಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ಇಲಾಖೆಗಳ ಕಟ್ಟಡ ನಿರ್ಮಾಣ ಯೋಜನೆಗೆ ಸಂಬಂಧಿಸಿದ ಇಲಾಖೆಯ ಅನುದಾನದಲ್ಲೇ ನಿರ್ಮಾಣ ಮಾಡಬೇಕು. ನಿವೇಶನ ಇಲ್ಲದ ಯಾವುದೇ ಇಲಾಖೆಗಳ ಕಟ್ಟಡ ನಿರ್ಮಾಣ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಬಾರದು. ಈ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ ಅನುದಾನವನ್ನು ಬಳಕೆ ಮಾಡಬಾರದು. ನೀಲನಕ್ಷೆಗೆ ಅನುಗುಣವಾಗಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ಸೂಚಿಸಿದರು.
ಹಣಕಾಸು ಇಲಾಖೆಯ ಸಹಮತ ಇಲ್ಲದ ಯಾವುದೇ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಬಾರದು. ಕಾಮಗಾರಿಗಳಿಗೆ ಕಾರ್ಯಾದೇಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಅಪೆಂಡಿಕ್ಸ್ ಇ ಯೋಜನೆಯಡಿ ಕಾಮಗಾರಿಗಳ ಮಂಜೂರಾತಿಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆಯ ಈಶಾನ್ಯ ವಲಯದ ವ್ಯಾಪ್ತಿಯಲ್ಲಿ 5058 ಕಿ.ಮೀ. ರಾಜ್ಯ ಹೆದ್ದಾರಿ, 8373 ಕಿ.ಮೀ. ಜಿಲ್ಲಾ ಮುಖ್ಯರಸ್ತೆಗಳಿದ್ದು, 1068 ವಸತಿ ಹಾಗೂ 833 ವಸತಿಯೇತರ ಕಟ್ಟಡಗಳಿವೆ. 2019-20 ನೇ ಸಾಲಿನ ವಾರ್ಷಿಕ ಅನುದಾನ ಯೋಜನೆಯಡಿ 1066 ಕೋಟಿ ರೂ. ನಲ್ಲಿ 313 ಕೋಟಿ ರೂ. ಅನ್ನು ಖರ್ಚು ಮಾಡಲಾಗಿದೆ. ರಸ್ತೆ ಮತ್ತು ಸೇತುವೆಗಳ ಮುಂದುವರೆದ ಹಾಗೂ ಹೊಸ ಅಪೆಂಡಿಕ್ಸ್ ಇ ಕಾಮಗಾರಿಗಳ ಯೋಜನೆಯಡಿ 1431 ಕೋಟಿ ರೂ. ವೆಚ್ಚದ 711 ಸ್ಪಿಲ್ ಓವರ್ ಕಾಮಗಾರಿಳಿದ್ದು, 344 ಕೋಟಿ ರೂ. ವೆಚ್ಚದ 151 ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಅವುಗಳಲ್ಲಿ 836 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, 303 ಕಾಮಗಾರಿಗಳು ಪೂರ್ಣಗೊಂಡಿವೆ. 196 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಉಳಿದ ಕಾಮಗಾರಿಗಳು ತಾಂತ್ರಿಕ ಅನುಮೋದನೆ ಹಾಗೂ ಟೆಂಟರ್ ಪ್ರಕ್ರಿಯೆ ಹಂತದಲ್ಲಿವೆ. ಇಲಾಖಾ ಕಟ್ಟಡ ಹಾಗೂ ನ್ಯಾಯಾಲಯ ಕಟ್ಟಡ ಕಾಮಗಾರಿ ಯೋಜನೆಯಡಿ 367 ಕೋಟಿ ರೂ. ವೆಚ್ಚದ 75 ಕಾಮಗಾರಿಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಅವುಗಳಲ್ಲಿ 21 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಎಲ್ಲಾ ವಲಯಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯೋಜನಾ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಪಂಚಾಯತ್ ಇಲಾಖೆಯ ಕಾಮಗಾರಿಗಳು, ರುದ್ರಭೂಮಿ ಕಾಮಗಾರಿಗಳು, ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯು ಅನುಷ್ಟಾನಗೊಳಿಸಬಾರದು. ಸಾರ್ವಜನಿಕ ಆಸ್ತಿಯಾಗಿ ರೂಪುಗೊಳ್ಳುವ ಕಾಮಗಾರಿಗಳನ್ನು ಕೈಗೊಂಡು ಲೋಕೋಪಯೋಗಿ ಇಲಾಖೆಯ ಘನತೆ ಹೆಚ್ಚಿಸಬೇಕು. ಇಂಜಿನಿಯರ್ ಸಮುದಾಯಕ್ಕೆ ಗೌರವ ಹೆಚ್ಚಾಗಬೇಕು. ಅಂತಹ ಕೆಲಸಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಡಿಸಿಎಂ ಗೋವಿಂದ ಎಂ. ಕಾರಜೋಳ ಆದೇಶಿಸಿದರು.
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯ ಕಾಮಗಾರಿಗಳನ್ನು ಶೇ. 100 ಅನುಷ್ಟಾನಗೊಳಿಸಿ, ಯಾವುದೇ ಅನುದಾನ ಉಳಿಕೆಯಾಗಬಾರದು. ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ ಯೋಜನೆಯಡಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅಗತ್ಯ ಇರುವ ಸೂಕ್ತ 20 ರಿಂದ 30 ಸ್ಥಳಗಳಲ್ಲಿ ಹೊಸ ಪ್ರವಾಸಿ ಮಂದಿರಗಳನ್ನು ನಿರ್ಮಿಸಬೇಕು. ಈಗಾಗಲೇ ನಿರ್ಮಿಸಿರುವ ಪ್ರವಾಸಿ ಮಂದಿರಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಅಗತ್ಯ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಗುರುಪ್ರಸಾದ್, ಡಿಸಿಎಂ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ, ಎಲ್ಲಾ ವಲಯಗಳ ಮುಖ್ಯ ಇಂಜಿನಿಯರ್‌ಗಳು, ಅಧೀಕ್ಷಕ ಇಂಜಿನಿಯರ್‌ಗಳು ಹಾಜರಿದ್ದರು.