ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರಿಗೆ ಇದೀಗ ಅನರ್ಹತೆ ಭೀತಿ ಎದುರಾಗಿದೆ.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪಕ್ಷದ ಒಗ್ಗಟ್ಟನ್ನು ಕಾಪಾಡುವ ಸಲುವಾಗಿ ಎಲ್ಲಾ 21 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.


ರಾಜೀನಾಮೆ ನೀಡಿರುವ ಶಾಸಕರಿಗೆ ವಾಪಸ್ ಬರುವಂತೆ ಮನವಿ:
ಈ ಸಂದರ್ಭದಲ್ಲಿ ಅತೃಪ್ತ ಶಾಸಕರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ರಾಜೀನಾಮೆ ನೀಡಿರುವ ಶಾಸಕರಿಗೆ ನಾವು ಈಗಲೂ ವಾಪಸ್ ಬರುವಂತೆ ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಶಾಸಕರು ತಮ್ಮ ರಾಜೀನಾಮೆ ಹಿಂಪಡೆಯದಿದ್ದರೆ, ರಾಜೀನಾಮೆ ನೀಡಿರುವ ಶಾಸಕರನ್ನು ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸ್ಪೀಕರ್​ ಅವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ" ಎಂದು ವಿವರಿಸಿದರು.



ಪ್ರಜಾಪ್ರಭುತ್ವದ ವಿರೋಧಿ ಕೆಲಸ ನಡೆಸುತ್ತಿರುವ ಬಿಜೆಪಿಯ ಷಡ್ಯಂತ್ರವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಶಾಸಕರೆಲ್ಲರೂ ಒಟ್ಟಿಗೆ ಸೇರಿ ಒಂದು ಗಂಟೆಗಳ ಕಾಲ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಿದ್ದೇವೆ. ಆನಂತರ ನೇರವಾಗಿ ಸ್ಪೀಕರ್ ಬಳಿ ತೆರಳಿ ನಮ್ಮ ಮನವಿ ಸಲ್ಲಿಸಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.




ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ಧಾಳಿ: 
ಬಿಜೆಪಿಯಿಂದ ಪ್ರಜಾಪ್ರಭುತ್ವ ವಿರೋಧಿ ಕೆಲಸ ನಡೆಯುತ್ತಿದೆ. ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಶಾಸಕರಿಗೆ ಹಣ, ಮಂತ್ರಿ ಪದವಿಯ ಆಮಿಷ ಒಡ್ಡುತ್ತಿದೆ. ಇದರಲ್ಲಿ ಅಮಿತ್ ಶಾ, ನರೇಂದ್ರ ಮೋದಿ ಅವರ ಕೈವಾಡವೂ ಇದೆ. ನಾನು ಈ ಹಿಂದೆಯೂ ಕೇಳಿದ್ದೆ, ಈಗಲೂ ಕೇಳುತ್ತಿದ್ದೇನೆ ಕೋಟ್ಯಾಂತರ ರೂ. ಕೊಡಲು ಅವರಿಗೆ ಹಣದ ಬಂತು ಎಂದು ವಾಗ್ಧಾಳಿ ನಡೆಸಿದರು.


2018ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣಕ್ಕೆ ಸರ್ಕಾರ ರಚನೆಗೆ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿದರು. ನಂತರ ನ್ಯಾಯಾಲಯದ ಮೊರೆ ಹೋದಾಗ ಸದನದಲ್ಲಿ ಬಿಜೆಪಿ ಬಹುಮತ ಸಾಬೀತಿಗೆ ಕೋರ್ಟ್​ ಆದೇಶ ನೀಡಿತು. ಬಳಿಕ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಸೋತರು. 


ತದನಂತರದಲ್ಲಿ,ಕಾನೂನುಬದ್ಧವಾಗಿ, ಸಂವಿಧಾನಬದ್ಧವಾಗಿ  ಕಾಂಗ್ರೆಸ್-ಜೆಡಿಎಸ್ ಪಕ್ಷ ಒಟ್ಟುಗೂಡಿ ಮೈತ್ರಿ ಸರ್ಕಾರ ರಚಿಸಿದ್ದೇವೆ. ಮತಗಳ ಶೇಕಡಾವಾರು ಅಂಕಿ-ಸಂಖ್ಯೆಗಳನ್ನೂ ಗಮನಿಸಿ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಶೇ. 38 ಮತ ಹಾಕಿದ್ದಾರೆ. ಬಿಜೆಪಿಗೆ ಲಭಿಸಿರುವುದು 37% ಮತಗಳು ಮಾತ್ರ. ನಾವು ಮತಗಳ ಶೇಕಡಾವಾರು ಅಂಕಿ-ಅಂಶಗಳ ಆಧಾರದ ಮೇಲೆ ಸರ್ಕಾರ ರಚಿಸಿದ್ದೇವೆ ಎಂಬುದನ್ನು ಸಿದ್ದರಾಮಯ್ಯ ಪುನರುಚ್ಚರಿಸಿದರು.