ಅಕ್ರಮ ಗಣಿಗಾರಿಕೆಗೆ ಸಿಎಂ ಯಡಿಯೂರಪ್ಪ ಕುಮ್ಮಕ್ಕು: Siddaramaiah
`ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯೇ ಅಪರಾಧ. ಅದಕ್ಕೆ ಏನು ಶಿಕ್ಷೆ ? ಅರ್ಜಿ ಹಾಕಿಕೊಂಡು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ?` ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ (Illegal Mining) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ (Siddaramaiah), ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ (Department of Mines and Geology) ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಕುಮ್ಮಕ್ಕು ಕಾರಣ ಎಂದು ದೂರಿದರು.
ಅಕ್ರಮ ಗಣಿಗಾರಿಕೆ (Illegal Mining) ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯೇ ಅಪರಾಧ. ಅದಕ್ಕೆ ಏನು ಶಿಕ್ಷೆ ? ಅರ್ಜಿ ಹಾಕಿಕೊಂಡು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ - 'ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಈ ಕಾಯಿದೆಗಳನ್ನು ಜಾರಿಗೆ ತಂದಿದೆಯೇ ಹೊರತು ರೈತರಿಗಲ್ಲ'
ಇದು ಅಕ್ರಮ ಮನೆ, ಜಮೀನು ಸಕ್ರಮ ಮಾಡುವುದಲ್ಲ. ಹಾಗಾದರೆ ಗಣಿ ಇಲಾಖೆಯ ಕಾನೂನು ಇರುವುದೇಕೆ. ಮುಖ್ಯಮಂತ್ರಿಗಳ ಹೇಳಿಕೆ ಖಂಡನೀಯ. ಬೇಜವಾಬ್ದಾರಿತರನದ ಪರಮಾವಧಿ. ಮುಖ್ಯಮಂತ್ರಿಗಳೇ ಕಾನೂನು ಬಾಹಿರ ಕ್ರಮಗಳನ್ನು ಸಕ್ರಮ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ. ಅದು ಅಕ್ರಮಗಳಿಗೆ ಸಹಕರಿಸಿದಂತೆ ಆಗುತ್ತದೆ. ರಾಜ್ಯದ ಯಾವುದೇ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರಲಿ, ಅದರಲ್ಲಿ ಯಾವುದೇ ಪಕ್ಷದವರು ಭಾಗಿಯಾಗಿರಲಿ. ಸರ್ಕಾರ ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ (Siddaramaiah) ಆಗ್ರಹಿಸಿದರು.
ಸಿಎಂ, ಉಸ್ತುವಾರಿ ಸಚಿವರೇ ಹೊಣೆ :
ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸಂಭವಿಸಿರುವ ದುರಂತ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದೆ. ಆಂಧ್ರದಿಂದ ಪರವಾನಿಗೆ ಇಲ್ಲದೆ ಜಿಲಿಟಿನ್ (Gilatin) ಮತ್ತು ಡೈನಮೇಟ್ (Dinomate) ತರಲಾಗಿತ್ತು. ಇದು ಮೊದಲ ಅಪರಾಧ. ತಂದಿದ್ದನ್ನು ಸುರಕ್ಷಿತವಾದ ಜಾಗದಲ್ಲಿ ಇಡದೇ ಇದ್ದಿದು ಎರಡನೇ ಅಪರಾಧ. ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯ ಈ ದುರಂತದಲ್ಲಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಹೇಳಿದರು.
ಇದನ್ನೂ ಓದಿ - D.K.Shivakumar: 'ವಲಸಿಗರಿಗೆ ಡಮ್ಮಿ ಖಾತೆ ನೀಡಿ ಯೂಸ್ ಅಂಡ್ ಥ್ರೋ ಮಾಡಿದ್ದಾರೆ'
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರೇ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಡೆ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲಿಯೇ ಪರವಾನಿಗೆ ಇಲ್ಲದೆ ಯದ್ವಾತದ್ವಾ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದರೆ ಇದು ಜಿಲ್ಲಾಡಳಿತರ ವೈಫಲ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರು ಇದರ ಹೊಣೆ ಹೊರಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಈ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಕೆ. ಎಸ್. ಈಶ್ವರಪ್ಪ (KS Eshwarappa) ಅವರು ಮಾತನಾಡುತ್ತಾ, ಊರಿನ ಒಳ್ಳೆಯದಕ್ಕೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕೊಂಡಿರಿ ಎಂದು ಸಲಹೆ ನೀಡಿದ್ದಾರೆ. ಜನಪ್ರತಿನಿಧಿಯೇ ಹೀಗೇ ಹೇಳಿದ ಬಳಿಕ ಅಧಿಕಾರಿಗಳು ಬೇವಾಬ್ದಾರಿಯಿಂದ ಕೆಲಸ ಮಾಡದೆ ಇನ್ನೇನು ಮಾಡಿಯಾರು ? ಜಿಲ್ಲೆಯಲ್ಲಿ ಎಲ್ಲ ಕ್ವಾರಿಗಳು ಮತ್ತು ಕ್ರಷರ್‍ಗಳು ಸಕ್ರಮವಾಗಿ ನಡೆಯುತ್ತಿವೆ ಎಂದೂ ಈಶ್ವರಪ್ಪ ಅವರೇ ಹೇಳಿದ್ದಾರೆ. ಆದರೆ ಆಯನೂರು ಮಂಜುನಾಥ್ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದಿದ್ದಾರೆ. ನನ್ನ ಪ್ರಕಾರ ಇದು ಗಂಭೀರವಾದ ವಿಷಯ. ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಹಾಗೂ ಆಯನೂರು ಮಂಜುನಾಥ್ ಮತ್ತು ಈಶ್ವರಪ್ಪ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸತ್ಯ ಏನೆಂದು ಗೊತ್ತಾಗಬೇಕು. ಮೃತರ ಕುಟುಂಬದವರಿಗೆ ನ್ಯಾಯಯುತ ಪರಿಹಾರ ಘೋಷಣೆ ಮಾಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಬೇಕು. ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಸಾಹಿತಿಗಳ ವಲಯಕ್ಕೆ ಮಾಡಿದ ಅವಮಾನ :
ಯಾರೋ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಹಂ.ಪಾ. ನಾಗರಾಜಯ್ಯ ಅವರನ್ನು ಮಂಡ್ಯ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವುದು ಇಡೀ ಸಾಹಿತಿಗಳ ವಲಯಕ್ಕೆ ಮಾಡಿದ ಅವಮಾನ. ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದ್ದೇವೆಯೋ ಅಥವಾ ಇಲ್ಲವೋ ಎಂಬ ಅನುಮಾನ ಇದರಿಂದ ಉಂಟಾಗಿದೆ. 'ನರೇಂದ್ರ ಮೋದಿಯವರ ಸರ್ಕಾರ ಆರಂಭದಲ್ಲಿ ಧರ್ಮರಾಯನಂತೆ ಇತ್ತು. ಈಗ ದುರ್ಯೋದನನ ಸರ್ಕಾರವಾಗಿದೆ' ಎಂದು ಹಂಪನಾ ಹೇಳಿದ್ದಾರೆ. ಇದರಲ್ಲಿ ಮಾನಹಾನಿಯಾಗುವ ಅಂಶ ಏನಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ಇದೆ. ಯಾರೂ ಅದನ್ನು ನಿಯಂತ್ರಿಸಲು ಆಗದು ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.