ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಂದ್ರ ಸಚಿವ ಸದಾನಂದಗೌಡಗೆ ಸವಾಲೆಸೆದ ಸಿಎಂ
ಸದಾನಂದ ಗೌಡರಿಗೆ ಕ್ಷೇತ್ರದ ಉಸ್ತುವಾರಿ ನೀಡಿದ ಕೂಡಲೇ ನನಗೇಕೆ ನಡುಕ ಉಂಟಾಗುತ್ತದೆ?
ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನಂತೂ ವರುಣ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ಒಂದು ವೇಳೆ ಪಕ್ಷ ಟಿಕೇಟ್ ನೀಡಿದರೆ ನನ್ನ ಮಗ ಡಾ. ಯತೀಂದ್ರ ಆ ಕ್ಷೇತ್ರದಿಂದ ಸ್ಪರ್ಧಿಸುತ್ತಾನೆ. ಧೈರ್ಯವಿದ್ದರೆ ಕೇಂದ್ರ ಸಚಿವ ಸದಾನಂದಗೌಡ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸದಾನಂದ ಗೌಡರಿಗೆ ನೇರ ಸವಾಲೆಸೆದಿದ್ದಾರೆ.
ಕೇಂದ್ರ ಸಚಿವ ಸದಾನಂದ ಗೌಡರು ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದ ನಂತರ ತಮ್ಮ ಭೇಟಿ ಸಿದ್ದರಾಮಯ್ಯ ಅವರಿಗೆ ನಡುಕ ಹುಟ್ಟಿಸಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಕಳೆದ ಚುನಾವಣೆಯಲ್ಲಿ ನಾನು 32,000 ಮತಗಳ ಅಂತರದಿಂದ ಜಯ ಸಾಧಿಸಿದ್ದೆ, ಈ ಬಾರಿ ನನ್ನ ಮಗ ವರುಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ವರುಣಾ ಕ್ಷೇತ್ರದಿಂದ ಗೆಲ್ಲುವುದು ಅಷ್ಟು ಸುಲಭವಲ್ಲ. ಯಾರಿಗೆ ಉಸ್ತುವಾರಿ ನೀಡಿದರೂ ಅಲ್ಲಿನ ಜನ ತಕ್ಷಣ ಬದಲಾಗುವುದಿಲ್ಲ. ಬಿಜೆಪಿಗೆ ಧೈರ್ಯವಿದ್ದರೆ, ಯಾರನ್ನೋ ನಿಲ್ಲಿಸಿ ಬಲಿಪಶು ಮಾಡುವ ಬದಲು ಸದಾನಂದ ಗೌಡರನ್ನೇ ಎದುರಾಳಿಯಾಗಿ ಕಣಕ್ಕಿಳಿಸಲಿ ಎಂದು ತಿಳಿಸಿದರು.