ಬೆಂಗಳೂರು: ಕೇಂದ್ರ ಸರ್ಕಾರವು ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ವಾರ್ಷಿಕ 6 ಸಾವಿರ ರೂಪಾಯಿ ನೆರವು ನೀಡುವ ಯೋಜನೆಗೆ ಪೂರಕವಾಗಿ ಕರ್ನಾಟಕ ಸರ್ಕಾರವು ಘೋಷಿಸಿರುವ 4 ಸಾವಿರ ರೂಪಾಯಿ ನೆರವಿನ ಯೋಜನೆ ಜಾರಿಗೆ ಇನ್ನೆರಡು ದಿನಗಳಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಮೊದಲ ಕಂತಿನ 2 ಸಾವಿರ ರೂಪಾಯಿಗಳನ್ನು 15-20 ದಿನಗಳೊಳಗೆ ರೈತರಿಗೆ ಪಾವತಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಪಿಎಂ ಕಿಸಾನ್ ಯೋಜನೆಯಿಂದ ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತನಿಗೆ ಅಲ್ಪ ನೆರವಾದರೂ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.


ಬರ ಪರಿಸ್ಥಿತಿ
ರಾಜ್ಯದಲ್ಲಿ ಈ ಬಾರಿಯೂ ಮಳೆಯ ತೀವ್ರ ಕೊರತೆ ಇದೆ. 2019ರ ಜನವರಿಯಿಂದ ಮೇ 31ರ ವರೆಗೆ ಪೂರ್ವ ಮುಂಗಾರು ಮಳೆಯಲ್ಲಿ ಸರಾಸರಿ ಶೇ. 42 ರಷ್ಟು ಕೊರತೆ ಇದೆ. ರಾಜ್ಯಕ್ಕೆ ಮುಂಗಾರು ಪ್ರವೇಶ ಎರಡು ವಾರ ತಡವಾಗಿದ್ದಲ್ಲದೆ, ಈ ವರೆಗೆ ವಾಡಿಕೆ ಮಳೆಗಿಂತ ಶೇ. 18ರಷ್ಟು ಮಳೆ ಕೊರತೆ ಇದೆ. ಜುಲೈ ತಿಂಗಳಲ್ಲಿಯೂ 3067ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಟ್ಯಾಂಕರ್ ಗಳ ಮೂಲಕ ಇಲ್ಲವೇ ಖಾಸಗಿ ಬೋರ್ ವೆಲ್‍ಗಳಿಂದ ನೀರು ಪೂರೈಕೆಯಾಗುತ್ತಿರುವುದು ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ ಎಂದು ಸಿಎಂ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.



ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಮೇವು ಲಭ್ಯತೆ ಮತ್ತು ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವ ಮೂಲಕ ಜನ ವಲಸೆ ಹೋಗುವುದನ್ನು ತಡೆಗಟ್ಟಲು ಹಾಗೂ ಅಂತರ್ಜಲ ವೃದ್ಧಿ ಮತ್ತು ಜಲಸಂರಕ್ಷಣೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.


ಬರ ನಿರ್ವಹಣೆ: ಬರ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಈವರೆಗೆ 618.1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸುಮಾರು 422 ಕೋಟಿ ರೂಪಾಯಿ ಅನುದಾನ ಲಭ್ಯವಿದೆ. ಬರ ಪರಿಹಾರ ಮತ್ತಿತರ ತುರ್ತು ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.


ಟ್ಯಾಂಕರುಗಳಿಂದ, ಖಾಸಗಿ ಬೋರ್ ವೆಲ್‍ಗಳ ಮೂಲಕ ನೀರು ಪೂರೈಕೆ ಮಾಡುವಾಗ ಟ್ಯಾಂಕರು ಸ್ವಚ್ಛತೆ ಕಡೆಗೆ ನಿಗಾ ವಹಿಸುವಂತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡಬೇಕು, ಜಾನುವಾರುಗಳಿಗೆ ನೀರು, ಮೇವಿನ ಲಭ್ಯತೆ, ಅಗತ್ಯವಿದ್ದಲ್ಲಿ ಮೇವು ಬ್ಯಾಂಕ್ ಸ್ಥಾಪನೆ, ಗೋಶಾಲೆಗಳನ್ನು ತೆರೆಯುವುದು ಮೊದಲಾದ ಕ್ರಮಗಳನ್ನು ಅಗತ್ಯವನ್ನಾಧರಿಸಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸಿಎಂ ಸೂಚನೆ
ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಿಗೆ ಕನಿಷ್ಠ ಎರಡು ಬಾರಿ ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಬೇಕು. ಅಂತೆಯೇ ಜಿಲ್ಲಾ ಮಟ್ಟದ ಅಧಿಕಾರಿಗಳು ಹದಿನೈದು ದಿನಗಳಿಗೊಮ್ಮೆ ಕ್ಷೇತ್ರ ಭೇಟಿ ಮಾಡಬೇಕು. ಈ ಸಂದರ್ಭದಲ್ಲಿ ತಳಹಂತದಲ್ಲಿಯೂ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಕ್ರಮ ವಹಿಸಬೇಕು ಹಾಗೂ ಸರ್ಕಾರ ನಡೆಸುವ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸುವುದು, ವಿವಿಧ ಯೋಜನೆಗಳ ಅನುಷ್ಠಾನ, ಬರ ಪರಿಹಾರ, ಉದ್ಯೋಗ ಖಾತರಿ ಯೋಜನೆಗಳ ಅನುಷ್ಠಾನ ಪರಿಶೀಲಿಸಬೇಕು ಎಂದು ಯಡಿಯೂರಪ್ಪ ಸೂಚಿಸಿದರು.


ಸಮರ್ಥವಾಗಿ ಪ್ರಕೃತಿ ವಿಕೋಪ ನಿರ್ವಹಣೆಯೊಂದಿಗೆ ಸಾರ್ವಜನಿಕರ ಕುಂದು ಕೊರತೆ ನಿವಾರಣೆ, ಕಾಲಮಿತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನ, ಸಕಾಲದಲ್ಲಿ ಅರ್ಜಿಗಳು, ಕಂದಾಯ ನ್ಯಾಯಾಲಯಗಳ ಪ್ರಕರಣಗಳ ಇತ್ಯರ್ಥ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ತಿಳಿಸಿದರು.


ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಇ.ವಿ. ರಮಣರೆಡ್ಡಿ, ಪಿ.ರವಿಕುಮಾರ್, ವಂದಿತಾ ಶರ್ಮ, ವಿ.ಮಂಜುಳಾ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.