ಉತ್ತರ ಕರ್ನಾಟಕದ ಅಭಿವೃದ್ಧಿ ಸಂಬಂಧಿಸಿದಂತೆ ಬಿಜೆಪಿಗೆ ತಿರುಗೇಟು ನೀಡಿದ ಸಿಎಂ
ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟು ಕಲಂ 371 ಜೆ ಜಾರಿಗೆ ತಂದವರು ನಾವಲ್ಲವೇ ?- ಸಿದ್ದರಾಮಯ್ಯ
ಕಲಬುರಗಿ : ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ,
ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ಶ್ವೇತಪತ್ರ ಮಾತ್ರವಲ್ಲ, ಯಾವುದೇ ಪತ್ರ ಬೇಕಾದರೂ ಹೊರಡಿಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಮ್ಮ ಸರ್ಕಾರದ ಅವಧಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೇವಲ 40-50 ಕೋಟಿ ರೂ.ಗಳ ಅನುದಾನ ನಿಗಧಿ ಮಾಡುತ್ತಿದ್ದವರು ಈಗ ನಮ್ಮನ್ನು ಲೆಕ್ಕ ಕೇಳುತ್ತಿದ್ದಾರೆ. ಇಂತಹವರಿಗೆ ನಾಚಿಕೆ ಆಗಬೇಕು ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತಮ್ಮ ರಾಜ್ಯ ಪ್ರವಾಸದ ನಾಲ್ಕನೇ ದಿನವಾದ ಶನಿವಾರ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮುಖ್ಯಮಂತ್ರಿಯವರು ಮಾತನಾಡಿದ ಸಿಎಂ,
ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟು ಕಾಲಂ 371 ಜೆ ಜಾರಿಗೆ ತಂದವರು ನಾವಲ್ಲವೇ ? ಹೀಗಿರುವಾಗ ಅಭಿವೃದ್ಧಿ ವಿಚಾರದಲ್ಲಿ ಬೇರೆಯವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ. ಅಧಿಕಾರದಲ್ಲಿದ್ದಾಗ ಏನೂ ಮಾಡದೇ ಈಗ ಲೆಕ್ಕ ಕೇಳುತ್ತಿರುವ ಬಿಜೆಪಿಯವರಿಗೆ ಕಿಂಚಿತ್ತೂ ಮಾನ, ವiರ್ಯಾದೆ ಇಲ್ಲ. ಇಷ್ಟಕ್ಕೂ ಉತ್ತರ ಕರ್ನಾಟಕದ ಅಭಿವೃದ್ದಿಗೆ ಬಿಜೆಪಿಯವರ ಕೊಡುಗೆಯಾದರೂ ಏನು ? ಎಂದು ಪ್ರಶ್ನಿಸಿದರು.
ಕಲಂ 371ಜೆ ಜಾರಿಗೆ ಬಂದ ಬಳಿಕ ನಮ್ಮ ಸರ್ಕಾರ ಅಭಿವೃದ್ದಿಗೆ ಎರಡೂವರೆ ಸಾವಿರ ಕೋಟಿ ರೂ. ನಿಗಧಿ ಮಾಡಿದೆ. ಈವರೆಗೆ 1800 ಕೋಟಿ ರೂ.ವೆಚ್ಚವಾಗಿದೆ. ಇನ್ನೂ 1500 ಕೋಟಿ ರೂ. ವೆಚ್ಚದ ಕಾಮಗಾರಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚಿಸಿದೆ ಎಂದು ವಿವರಿಸಿದರು.
ಬಿಜೆಪಿಯವರು ರೈತರ ವಿರೋಧಿಗಳು :
ಸಾಲ ಮನ್ನಾ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರದ ಬಿಜೆಪಿಯವರು ರೈತರ ವಿರೋಧಿಗಳು. ಯಾವುದೇ ಕಾರಣಕ್ಕೂ ರೈತರು ಆ ಪಕ್ಷಕ್ಕೆ ಮತ ಹಾಕಬಾರದು. ಮತ ಕೇಳುವ ನೈತಿಕ ಹಕ್ಕು ಸಹ ಬಿಜೆಪಿಯವರಿಗೆ ಇಲ್ಲ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಮ್ಮ ರಾಜ್ಯ ಪ್ರವಾಸ ಮುಂದಿನ ಚುನಾವಣೆಗಾಗಿ ಅಲ್ಲ:
ಮುಂಬರುವ ವಿಧಾನಸಭೆ ಚುನವಣೆಯನ್ನು ಗಮನದಲ್ಲಿಟ್ಟುಕೊಂಡು ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಈಗ ಶಿಲಾನ್ಯಾಸಗೊಳ್ಳುವ ಕಾಮಗಾರಿಗಳು ಜಾರಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸ ಮಾಡುತ್ತಿಲ್ಲ. ಜೊತೆಗೆ ನಮ್ಮ ಸರ್ಕಾರ ಕಳೆದ ನಾಲ್ಕೂವರೆ ವರ್ಷದಿಂದಲೂ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಬಾಕಿ ಕೊಡಲಿಲ್ಲ ಎಂಬ ಕಾರಣಕ್ಕೆ ರೈತರ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದರು. ಆದರೆ ನಮ್ಮ ಸರ್ಕಾರ ರೈತರ ಬಾಕಿಯನ್ನು ಮನ್ನಾ ಮಾಡಿತು. ಅಷ್ಟೇ ಅಲ್ಲ, ದೇವರಾಜ ಅರಸು, ಡಾ.ಬಿ.ಆರ್. ಅಂಬೇಡ್ಕರ್, ವಾಲ್ಮೀಕಿ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಗಳ ಮೂಲಕ ಪಡೆದಿದ್ದ ಸಾಲ ಮತ್ತು ಆ ಸಾಲದ ಮೇಲಿನ ಬಡ್ಡಿಯನ್ನು ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯಲ್ಲಿ ಮನ್ನಾ ಮಾಡಿದ್ದು ನಮ್ಮ ಹೆಮ್ಮೆ ಎಂದು ಮುಖ್ಯಮಂತ್ರಿಯವರು ಹೇಳಿದರು.