ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲಾ ಹಳದಿಯಂತೆ; ಬಿಜೆಪಿ ಟೀಕೆಗೆ ಸಿಎಂ ಪ್ರತಿಕ್ರಿಯೆ
ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿ ಎಂಬಂತೆ ಬಿಜೆಪಿ ಅವರಿಗೆ ಎಲ್ಲವೂ ತಪ್ಪಾಗೇ ಕಾಣಿಸುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಬೆಂಗಳೂರು: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿ ಎಂಬಂತೆ ಬಿಜೆಪಿ ಅವರಿಗೆ ಎಲ್ಲವೂ ತಪ್ಪಾಗೇ ಕಾಣಿಸುತ್ತದೆ. ಅವರು ಕೇವಲ ಹುಳುಕು ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಏನೇ ಮಾತನಾಡುವುದಿದ್ದರೂ ಸೋಮವಾರದಿಂದ ಸದನದಲ್ಲಿ ಮಾತನಾಡಲಿ, ಉತ್ತರಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿದ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಹಾಸನದ ಹೊರವರ್ತುಲ ರಸ್ತೆ ಯೋಜನೆಗೆ ಅನುದಾನ ನೀಡಿದ್ದೇವೆ. ಆದರೆ, ಅನೇಕರು ಇದನ್ನು ಟೀಕಿಸುತ್ತಿದ್ದಾರೆ. ಹಾಸನದ ಶಾಸಕ ರೇವಣ್ಣ ಅಲ್ಲ ಎಂಬುದು ಎಲ್ಲರಿಗೂ ತಿಳಿಯಬೇಕು. ಒಂದು ವೇಳೆ ಬಿಜೆಪಿ ಶಾಸಕ ಅಥವಾ ಬಿಜೆಪಿ ನಾಯಕರಿಗೆ ಆ ಯೋಜನೆ ಬೇಡವಾದರೆ ನಾವು ಅದನ್ನು ವಾಪಸ್ ಪಡೆಯುತ್ತೇವೆ ಎಂದರು.
ಇದು ರಾಜ್ಯ ಬಜೆಟ್ ಅಲ್ಲ; ಅಣ್ಣ-ತಮ್ಮಂದಿರ ಬಜೆಟ್- ಯಡಿಯೂರಪ್ಪ ಟೀಕೆ
ಈ ಬಾರಿಯ ಬಜೆಟ್'ನಲ್ಲಿ ಪೆಟ್ರೋಲ್ ಬೆಲೆ ಏರಿಸಲಾಗಿದೆ ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಆದರೆ, ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಕೇರಳದಲ್ಲಿ ಪೆಟ್ರೋಲ್ ಬೆಲೆ 78.21 ರೂ., ಆಂಧ್ರದಲ್ಲಿ 74,81 ರೂ., ಬಿಜೆಪಿ ಸರ್ಕಾರ ಇರುವ ಮಹಾರಾಷ್ಟ್ರದಲ್ಲೂ ಪೆಟ್ರೋಲ್ ಬೆಲೆ ಜಾಸ್ತಿ ಇದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 19.48 ರೂ. ಏರಿಕೆ ಮಾಡಿದ್ದಾರೆ. ಸುಮಾರು ಶೇ. 200ರಷ್ಟು ಪೆಟ್ರೋಲ್ ತೆರಿಗೆ ಜಾಸ್ತಿ ಮಾಡಿದ್ದಾರೆ ಎಂದರು. ಆದರೆ ಪ್ರತಿಪಕ್ಷ ಬಿಜೆಪಿ ಈ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಹೈಲೈಟ್ಸ್
ಸಿದ್ದರಾಮಯ್ಯನವರು 2018-19ನೇ ಸಾಲಿನ 2,09,181 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. ಸಿದ್ದರಾಮಯ್ಯನವರ ಕಾಲದಲ್ಲಿ ಮಂಡನೆಯಾದ ಬಜೆಟ್‌ನ ಎಲ್ಲಾ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಈ ಹಿಂದಿನ ಬಜೆಟ್'ಗಿಂತ ಬಜೆಟ್ ಗಾತ್ರ ಈಗ 2,18,488 ಕೋಟಿಗೆ ಏರಿಕೆ ಮಾಡಿದ್ದೇವೆ. 9,307 ಕೋಟಿ ಗಾತ್ರವನ್ನು ಏರಿಕೆ ಮಾಡಿದ್ದೇವೆ ಎಂದರು.