ಬೆಂಗಳೂರು: ಅರ್ಕಾವತಿ ಬಡಾವಣೆಯ ಥಣಿಸಂದ್ರದಲ್ಲಿ ಜಮೀನು ಡಿನೋಟಿಫಿಕೇಶನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಖುಲಾಸೆಗೊಳಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ನಾಲ್ವರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಖುಲಾಸೆಗೊಳಿಸಿದ್ದು, ಮಾಜಿ ಸಚಿವ ಚೆನ್ನಿಗಪ್ಪ ವಿರುದ್ಧದ ವಿಚಾರಣೆ ಮುಂದುವರಿಯಲಿದೆ ಎಂದು ಆದೇಶ ನೀಡಿದೆ.


2007ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಅವರ ಒತ್ತಾಯದ ಮೇರೆಗೆ ಶ್ರೀರಾಮ್‌ ಮತ್ತು ಎ.ವಿ. ರವಿಪ್ರಕಾಶ್‌ ಎನ್ನುವವರಿಗೆ ಬಿಡಿಎ ವಶಪಡಿಸಿಕೊಂಡು ಪರಿಹಾರ ನೀಡಿ ನಿವೇಶನ ಹಂಚಿಕೆ ಮಾಡಿದ್ದ ಬೆಂಗಳೂರಿನ ಥಣಿಸಂದ್ರದ 3 ಎಕರೆ 24 ಗುಂಟೆ ಭೂಮಿಯನ್ನು ಡಿ ನೋಟಿಫೈ ಮಾಡಿದ್ದರು. ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಸಿ. ಚೆನ್ನಿಗಪ್ಪ ಎರಡನೇ ಆರೋಪಿಯಾಗಿದ್ದರು.


ಜಮೀನಿನ ಮಾಲೀಕ ಎವಿ ರವಿಪ್ರಕಾಶ್ ಹಾಗೂ ಎವಿ ಶ್ರೀರಾಮ್ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಕ್ರಮವಾಗಿ ಡಿನೋಟಿಫೈ ಮಾಡಿಕೊಡಲಾಗಿದೆ ಎಂದು ಆರೋಪಿಸಿ 2012 ರಲ್ಲಿ ಚಾಮರಾಜನಗರದ ಮಹದೇವ ಸ್ವಾಮಿ ಎನ್ನುವವರು ಲೋಕಾಯುಕ್ತ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಆರೋಪದಿಂದ ಕೈಬಿಡುವಂತೆ ಕೋರಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮನವಿ ಸಲ್ಲಿಸಿದ್ದರು.


ಅದರಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವಿ. ಪಾಟೀಲ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ,  ಜ್ಯೋತಿ ರಾಮಲಿಂಗಂ, ಶ್ರೀರಾಮು ಮತ್ತು ರವಿ ಪ್ರಕಾಶ್ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ.