ಮಂಡ್ಯದ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಕಲ ಸವಲತ್ತು: ಸಿಎಂ ಭರವಸೆ
ಹುತಾತ್ಮ ಯೋಧನ ಕುಟುಂಬದವರಿಗೆ ಕರೆ ಮಾಡಿ ಸಾಂತ್ವನ ಹೇಳಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಎಚ್.ಗುರು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ಸವಲತ್ತು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಹುತಾತ್ಮ ಯೋಧ ಮಂಡ್ಯದ ಎಚ್. ಗುರು ಅವರ ಕುಟುಂಬ ವರ್ಗದೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ. ಜಮ್ಮುವಿನಲ್ಲಿ ಭಯೋತ್ಪಾದಕರ ಕುಕೃತ್ಯಕ್ಕೆ ಬಲಿಯಾದ ನಮ್ಮ ವೀರ ಯೋಧನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಪರಿಹಾರವನ್ನು ಕೂಡಲೇ ದೊರಕಿಸಿಕೊಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ತಿಳಿಸಿದ್ದಾರೆ.
ಜಮ್ಮುವಿನ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ರಾಜ್ಯದ ಯೋಧ ಗುರು ಹುತಾತ್ಮರಾಗಿದ್ದಾರೆ. 82ನೇ ಬೆಟಾಲಿಯನ್ ನ ಯೋಧರಾಗಿದ್ದ ಗುರು ಅವರು ಮಂಡ್ಯದ ಮದ್ದೂರಿನ ಗುಡಿಗೆರೆ ನಿವಾಸಿ. ದೇಶಕ್ಕಾಗಿ ಗುರು ಸೇರಿದಂತೆ ಎಲ್ಲ ಯೋಧರ ತ್ಯಾಗ ಸದಾ ಸ್ಮರಣೀಯ. ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.