ಬೆಂಗಳೂರು: ವಿರೋಧ ಪಕ್ಷಗಳ ಮತ್ತು ರೈತರ ಒಡತ್ತದಕ್ಕೆ ಕಡೆಗೂ ಮಣಿದಿರುವ ರಾಜ್ಯ ಸಂಮಿಶ್ರ ಸರ್ಕಾರ ರೈತರ ಸುಸ್ತಿ ಸಾಲದೊಂದಿಗೆ ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದ 1 ಲಕ್ಷದವರೆಗಿನ ಚಾಲ್ತಿ ಸಾಲವನ್ನೂ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಮಂಡಲದ ಉಭಯ ಸದನದಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಗುರುವಾರ ಸುದೀರ್ಘ ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಸುಸ್ತಿ ಸಾಲ ಮನ್ನಾದಿಂದಾಗಿ ಸರ್ಕಾರದ ಮೇಲೆ ಹೆಚ್ಚುವರಿಯಾಗಿ 10,700 ಕೋಟಿ ರೂ. ಬೇಕಾಗುತ್ತದೆ. ಅನ್ನಭಾಗ್ಯ ಯೋಜನೆಯಲ್ಲಿ ಹಿಂದಿನಂತೆ 7 ಕೆ.ಜಿ. ಅಕ್ಕಿ ನೀಡಲು ನಿರ್ಧರಿಸಲಾಗಿದೆ. ಅಕ್ಕಿಯನ್ನು 5 ಕೆ.ಜಿ.ಗೆ ಇಳಿಸುವುದಾಗಿ ಸಿಎಂ ಬಜೆಟ್‌ನಲ್ಲಿ ಘೋಷಿಸಿದ್ದರು. 2 ಕೆ.ಜಿ. ಅಕ್ಕಿ ಹೆಚ್ಚಿಸುವುದರಿಂದ ಸರಕಾರದ ಮೇಲೆ 2500 ಕೋಟಿ ರೂ. ಹೊರೆ ಬೀಳಲಿದೆ. 


ಅಷ್ಟೇ ಅಲ್ಲದೆ, ಕರ್ನಾಟಕ ಧನವಿನಿಯೋಗ ವಿಧೇಯಕ, ಮೋಟಾರು ವಾಹನಗಳ ತೆರಿಗೆ ವಿಧೇಯಕ, ಕರ್ನಾಟಕ ಮೌಲ್ಯವರ್ಧಿತ ತೆರಿಗೆ ವಿಧೇಯಕ, ಕರ್ನಾಟಕ ವಿದ್ಯುಚ್ಛಕ್ತಿ ವಿಧೇಯಕಗಳಿಗೆ ವಿಧಾನಸಭೆ ಅಂಗೀಕಾರ ನೀಡಿದೆ. 


ಅಲ್ಪಸಂಖ್ಯಾತ ಇಲಾಖೆಗೆ ನಿಗದಿ ಮಾಡಿದ್ದ 2270 ಕೋಟಿ ರೂ.ಯನ್ನು 2500 ಕೋಟಿ ರೂ.ಗೆ ಹೆಚ್ಚಿಸಿ ಮೈತ್ರಿ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ವಿರೋಧಿಯಲ್ಲ ಎಂಬ ಸಂದೇಶ ಸಾರಲಾಗಿದೆ. ಕಳಸಾ-ಬಂಡೂರಿ ಯೋಜನೆಗೆ 200 ಕೋಟಿ ರೂ. ಮೀಸಲಿಡುವಂತೆ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಮಾಡಿದ ಒತ್ತಾಯಕ್ಕೆ ಸ್ಪಂದಿಸಿರುವ ಸಿಎಂ ''ಜುಲೈ ಅಂತ್ಯ ಅಥವಾ ಆಗಸ್ಟ್‌ ಮೊದಲನೇ ವಾರದಲ್ಲಿ ಮಹದಾಯಿ ನ್ಯಾಯಾಧಿಕರಣ ತೀರ್ಪು ಪ್ರಕಟವಾಗಲಿದ್ದು, ತಕ್ಷಣದಿಂದಲೇ ಅಲ್ಲಿ ಕಾಮಗಾರಿ ಆರಂಭಿಸಲು ಹಣ ಹೊಂದಿಸಲಾಗುವುದು ಎಂದು ತಿಳಿಸಿದರು.