ಸಿಎಂ ಕುಮಾರಸ್ವಾಮಿ ಬುದ್ಧಿ ಸ್ಥಿಮಿತದಲ್ಲಿಲ್ಲ, ಅಧಿಕಾರದ ಮದವೇರಿದೆ: ಯಡಿಯೂರಪ್ಪ ಟೀಕೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರದ ಮದವೇರಿದ್ದು, ಸ್ವೇಚ್ಛಾಚಾರದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರದ ಮದವೇರಿದ್ದು, ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ದುರಹಂಕಾರದ, ಸ್ವೇಚ್ಛಾಚಾರದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ಸೋಮವಾರ ಚನ್ನಪಟ್ಟಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕೊಪ್ಪಳದ ರೈತರು ಸಂಪೂರ್ಣ ಸಾಲ ಮನ್ನಾ ಮಾಡಲು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಪ್ರತಿಕ್ರಿಯಿಸುತ್ತಾ, "ಹಣ, ಜಾತಿಯ ಆಮಿಷಕ್ಕೆ ಒಳಗಾಗಿ ಚುನಾವಣೆಯಲ್ಲಿ ಮತ ಹಾಕಿದ್ದೀರಿ. ಮತ ಹಾಕುವಾಗ ನನ್ನ ನೆನಪು ಬರಲಿಲ್ಲ, ಈಗ ಸಾಲ ಮನ್ನಾ ಮಾಡಲಿಲ್ಲ ಎಂದು ಪ್ರತಿಭಟಿಸುವ ನಿಮಗೆ ನಿಜಕ್ಕೂ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿ.ಎಸ್.ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸಮಸ್ಯೆ ಬಗೆಹರಿಸಿ ಎಂದು ಕೇಳಿದ ಜನತೆಗೆ ನೈತಿಕತೆಯ ಪ್ರಶ್ನೆ ಮಾಡುವ ಕುಮಾರಸ್ವಾಮಿ ಅವರಿಗೆ ಬುದ್ಧಿ ಹತೋಟಿಯಲ್ಲಿಲ್ಲ. ಅಧಿಕಾರದ ಮದವೇರಿ ದುರಹಂಕಾರ ತಾಂಡವವಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇನೆ ಎಂಬುದನ್ನೇ ಸಿಎಂ ಮರೆತಿರುವಂತಿದೆ ಎಂದು ಟೀಕಿಸಿರುವ ಯಡಿಯೂರಪ್ಪ, ರಾಜ್ಯದ ಇತಿಹಾಸದಲ್ಲಿಯೇ ಯಾವ ಮುಖ್ಯಮಂತ್ರಿಯೂ ಜನತೆಗೆ ಹೀಗೆ ಮಾತನಾಡಿಲ್ಲ. ಇದರಿಂದ ಜನರ ಮನಸ್ಸಿಗೆ ನೋವಾಗಿದೆ. ಇದು ರಾಜ್ಯದಲ್ಲಿ ನಿರಂಕುಶ ಪ್ರಭುತ್ವಕ್ಕೆ ದಾರಿಮಾಡಿಕೊಡುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ಕೊಪ್ಪಳದ ಜನರ ಬೇಡಿಕೆಯನ್ನು ಕಡೆಗಣಿಸಿ, ಪ್ರಚೋದನಕಾರಿ ಹೇಳಿಕೆ ನೀಡಿ ಪ್ರತ್ಯೇಕ ರಾಜ್ಯದ ಕೂಗಿಗೆ ಪುಷ್ಟಿ ನೀಡಿ ಜನರನ್ನು ರೊಚ್ಚಿಗೇಳುವಂತೆ ಮಾಡುತ್ತಿದ್ದಾರೆ. ಇದಕ್ಕೆಕಾಂಗ್ರೆಸ್ ನಾಯಕರುಗಳು ಉತ್ತರಿಸಬೇಕು. ಕುಮಾರಸ್ವಾಮಿಯವರ ಈ ಸರ್ವಾಧಿಕಾರಿ ಮನಸ್ಥಿತಿಯನ್ನು ಸಹಿಸಿಕೊಂಡು ಸುಮ್ಮನಿರುತ್ತಾರೋ ಅಥವಾ ಅವರನ್ನು ದಾರಿಗೆ ತರುತ್ತಾರೆಯೋ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟ ಪಡಿಸಬೇಕು. ಇಲ್ಲವಾದರೆ, ಕುಮಾರಸ್ವಾಮಿಯವರ ನಡೆ ನುಡಿ ಮತ್ತು ಅವರ ಜನ ವಿರೋಧಿ ನೀತಿ ಬಗ್ಗೆ ಬಿಜೆಪಿ ಹೋರಾಟ ರೂಪಿಸಿ, ಇವರ ಸಂವಿಧಾನ ವಿರೋಧಿ ಹೇಳಿಕೆಗಳನ್ನು ರಾಜ್ಯಪಾಲರ ಮತ್ತು ರಾಷ್ಟ್ರಪತಿಗಳ ಗಮನಕ್ಕೆ ತರಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.