ಬೆಂಗಳೂರು : ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳ ಮೂಲಭೂತ ಸೌಕರ್ಯಕ್ಕಾಗಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿನ ಪ್ರಥಮ ದರ್ಜೆ, ಪದವಿಪೂರ್ವ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜುಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನಬಾರ್ಡ್ ವತಿಯಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಕರೆಯಲಾಗಿತ್ತು. 


ರಾಜ್ಯದ ಒಟ್ಟು 502 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿಗಳ ದುರಸ್ತಿ ಮತ್ತು  ನಿರ್ಮಾಣಕ್ಕಾಗಿ 300 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು,  ರಾಜ್ಯದ 233 ಸರ್ಕಾರಿ ಪ್ರೌಢಶಾಲೆಗಳನ್ನು ನೆಲಸಮಗೊಳಿಸಿ ಮರುನಿರ್ಮಾಣಕ್ಕೆ 7890.75 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಈಗಾಗಲೇ ಇಲಾಖೆ ವತಿಯಿಂದ ಸಲ್ಲಿಸಲಾಗಿದ್ದು, ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. 
 
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ಮತ್ತು ಶೌಚಾಲಯ ನಿರ್ಮಾಣಕ್ಕೆ ರೂ. 150 ಕೋಟಿ ಗಳ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ತ್ವರಿತವಾಗಿ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳುವಂತೆ ಹೆಚ್ಡಿಕೆ ತಿಳಿಸಿದರು. 


2018-19ನೇ ಸಾಲಿನ ಆಯವ್ಯಯದಲ್ಲಿ ನಬಾರ್ಡ್ ಕಾಮಗಾರಿಗಳಿಗೆ  ರೂ.5.76 ಕೋಟಿಗಳನ್ನು ಹಂಚಿಕೆ ಮಾಡಲಾಗಿದ್ದು, ಅವಶ್ಯವಿರುವ ರೂ.39.42 ಕೋಟಿಗಳನ್ನು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. 
ಕಾಲೇಜು ಶಿಕ್ಷಣ ಇಲಾಖೆಯಲ್ಲಿ 395 ಪ್ರಾಂಶುಪಾಲರನ್ನು ನೇಮಕ ಮಾಡಿಕೊಳ್ಳಬೇಕಿದ್ದು, 480 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಒಟ್ಟಾರೆ 3000 ಹುದ್ದೆಗಳ ಸೃಜನೆ ಆಗಬೇಕಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಎನ್.ಮಂಜುಳಾ ಸಭೆಯ ಗಮನಕ್ಕೆ ತಂದರು. ಈ ಕುರಿತು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. 


ಸಭೆಯಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ಸಚಿವ ಜಿ.ಟಿ.ದೇವೇಗೌಡ, ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ:ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.