ಬೆಳಗಾವಿ: ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸುವ ಬಡವರ ಬಂಧು ಯೋಜನೆಯ ಲಾಭವನ್ನು  ರಾಜ್ಯದಲ್ಲಿರುವ ಒಟ್ಟು 4.5 ಲಕ್ಷ ಬೀದಿಬದಿ ವ್ಯಾಪಾರಿಗಳ ಕುಟುಂಬಗಳಿಗೂ ತಲುಪಿಸಲಾಗುವುದು. ಅದೇ ರೀತಿ ಕಾಯಕ ಯೋಜನೆಯಡಿ ಮಹಿಳಾ ಸಂಘಗಳು ತಯಾರಿಸುವ ಉತ್ಪನ್ನಗಳನ್ನು ಸರ್ಕಾರದ ವತಿಯಿಂದಲೇ ಖರೀದಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.


COMMERCIAL BREAK
SCROLL TO CONTINUE READING

ಸಹಕಾರ ಇಲಾಖೆಯ ವತಿಯಿಂದ ಧರ್ಮನಾಥ ಭವನದಲ್ಲಿ ಗುರುವಾರ (ಡಿ.20) ಏರ್ಪಡಿಸಿದ್ದ 'ಕಾಯಕ' ಯೋಜನೆಯ ಉದ್ಘಾಟನೆ ಮತ್ತು 'ಬಡವರ ಬಂಧು' ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿವ ಅವರು, ದುಡಿಯುವ ಕೈಗಳಿಗೆ ಆರ್ಥಿಕ ಬಲ ತುಂಬುವುದು ಕಾಯಕ ಯೋಜನೆಯ ಉದ್ದೇಶ ಎಂದರು.


ಕಾಯಕ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ವಿವಿಧ ಬಗೆಯ ಉತ್ಪಾದನೆಗಳ ತಯಾರಿಕೆ ಮತ್ತು ಮಾರಾಟಕ್ಕೆ ತರಬೇತಿ ನೀಡಲಾಗುವುದು. ಅಂತಹ ಸಂಘಗಳು ತಯಾರಿಸುವ ಉತ್ಪನ್ನಗಳನ್ನು ಸರ್ಕಾರದ ಮೂಲಕವೇ ಖರೀದಿಸುವ ಮೂಲಕ ಅವರಿಗೆ ನೆರವಾಗುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.


ಬಡವರು ಸಾಲದಿಂದ ಜೀವನ ನಿರ್ವಹಣೆ ಮಾಡುತ್ತಿದ್ದು, ಅವರಿಗೆ ಆರ್ಥಿಕ ನೆರವು ನೀಡಲು ಬಡವರ ಬಂಧು ಹಾಗೂ ಕಾಯಕ ಯೋಜನೆ ರೂಪಿಸಲಾಗಿದೆ. ಪ್ರತಿ ಬಡ ಕುಟುಂಬವು ನೆಮ್ಮದಿಯ ಬದುಕು ನಡೆಸಬೇಕು. ಮುಂದಿನ ದಿನಗಳಲ್ಲಿ ಆ ರೀತಿಯ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ನಮ್ಮದು ಎಂದು ಕುಮಾರಸ್ವಾಮಿ ಹೇಳಿದರು.


ಕಾಯಕ ಯೋಜನೆ:
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ  ದುಡಿಯುವ ಕೈಗಳಿಗೆ ಆರ್ಥಿಕ ಬಲ ತುಂಬುವುದು ಈ ಕಾಯಕ ಯೋಜನೆಯ ಉದ್ದೇಶವಾಗಿದೆ. ಐದು ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ ನೀಡಲು ಸರ್ಕಾರ ಮುಂದಾಗಿದೆ.


ಕಾಯಕ ಯೋಜನೆಯು ಇಡೀ ದೇಶದಲ್ಲಿ ಮಾದರಿ:
ಕಾಯಕ ಯೋಜನೆಯಡಿ ಉತ್ಪಾದಿಸಲಾಗುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಕೂಡ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಯಡಿ ಉತ್ಪಾದಿಸಲಾಗುವ ಉತ್ಪನ್ನಗಳು ಹಳ್ಳಿ, ಪಟ್ಟಣದಿಂದ ದೆಹಲಿಯವರೆಗೆ, ಬಸ್ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ  ಮಾರಾಟಕ್ಕೆ ಲಭ್ಯ ಇರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಇಲಾಖೆಯು ಕಾರ್ಯಯೋಜನೆ ರೂಪಿಸಲಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.


ಬಡ್ಡಿ ಸುಳಿಯಿಂದ ಬಡ ವ್ಯಾಪಾರಿಗಳನ್ನು ರಕ್ಷಿಸುವುದು ಹಾಗೂ ದುಡಿಯುವ ಜನರಿಗೆ ಆರ್ಥಿಕ ನೆರವು ನೀಡುವ ಈ ಎರಡು ಯೋಜನೆಗಳನ್ನು ಜನರು ಸದುಪಯೋಗಪಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಕಾಶೆಂಪುರ ಕರೆ ನೀಡಿದರು.


ಇದೇ ಸಂದರ್ಭದಲ್ಲಿ ಬಡವರ ಬಂಧು ಯೋಜನೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚೆಕ್ ವಿತರಿಸಿದರು.