ನ್ಯಾ. ದಿನೇಶ್ ಮಹೇಶ್ವರಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರ್ ರನ್ನು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾಗಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ನೇಮಕ ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರ್ ರನ್ನು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾಗಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರನ್ನು ಇಂದು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ರಾಜ್ಯ ಹೈಕೋರ್ಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಅವರು ನೀಡಿರುವ ಹಲವು ತೀರ್ಪುಗಳು ಅದರಲ್ಲೂ ನಗರದ ಸ್ವಚ್ಛತೆಗೆ ಸಂಬಂಧಿಸಿದಂತೆ ನೀಡಿರುವ ನಿರ್ದೇಶನ ಸರ್ಕಾರಕ್ಕೆ ಮಾರ್ಗಸೂಚಿಯಂತಿತ್ತು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು. ಅವರ ಮುಂದಿನ ವೃತ್ತಿ ಜೀವನಕ್ಕೆ ಮುಖ್ಯಮಂತ್ರಿಗಳು ಶುಭ ಹಾರೈಸಿದರು.
ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ 1958 ರಲ್ಲಿ ಜನಿಸಿ ಮುಂದೆ ಜೋಧ್ಪುರ್ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯನ್ನು ಪಡೆದರು. ನಂತರ ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ವಕೀಲರಾಗಿ ಅಭ್ಯಾಸ ಮಾಡಿದರು. 2004 ರಲ್ಲಿ ರಾಜಸ್ಥಾನ್ ಹೈಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದರು. 2014 ರಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಸೇವೆ ಸಲ್ಲಿಸಿದರು. 2016 ರಲ್ಲಿ ಮೇಘಾಲಯ ಹೈಕೋರ್ಟ್ನ ಉಸ್ತುವಾರಿಯನ್ನು ವಹಿಸಿಕೊಂಡರು.ಕರ್ನಾಟಕ ಹೈಕೋರ್ಟ್ ನಲ್ಲಿ ಮುಖ್ಯನ್ಯಾಯಮೂರ್ತಿಯಾಗುವ ಮೊದಲು ಹಲವಾರು ಹೈಕೋರ್ಟ್ಗಳಲ್ಲಿ ಕಾರ್ಯ ನಿರ್ವಹಿಸಿದರು.
ನಂತರ ದಿನೇಶ್ ಮಹೇಶ್ವರಿ ಕೊಲಿಜಿಯಂ ಪದ್ದತಿಯ ಮೂಲಕ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದರು. ಇದೀಗ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ದಿನೇಶ್ ಮಹೇಶ್ವರಿ ಅವರನ್ನು ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾಗಿ ನೇಮಕ ಮಾಡಿದ್ದಾರೆ.