ಚೆನ್ನೈ: ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್‍ನಲ್ಲಿ  ಚಿಕಿತ್ಸೆ ಪಡೆಯುತ್ತಿರುವ  ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶ್ರೀಗಳ ಆರೋಗ್ಯ ವಿಚಾರಿಸಿದರು.


COMMERCIAL BREAK
SCROLL TO CONTINUE READING

ಶ್ರೀಗಳು ಮಾಡುತ್ತಿರುವ ತ್ರಿವಿಧ ದಾಸೋಹ ಕೈಂಕರ್ಯ ಇಡೀ ದೇಶಕ್ಕೆ ಮಾದರಿಯಾಗಿದ್ದು ಅವರ ಆಶೀರ್ವಾದ ಎಲ್ಲರ ಮೇಲೂ ನಿರಂತರವಾಗಿರಲಿ. ಶ್ರೀಗಳು ಶೀಘ್ರವೇ ಗುಣಮುಖರಾಗಿ ಜನತಾ ಜನಾರ್ದನನ ಸೇವೆಯಲ್ಲಿ ತೊಡಗಲಿ  ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.


ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಇಲ್ಲಿನ ಡಾ.ರೇಲಾ ಇನ್​ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್'ನಲ್ಲಿ ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದರು.


ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಶಿವಕುಮಾರಸ್ವಾಮಿ ಅವರನ್ನು ಗುರುವಾರ ಐಸಿಯುನಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ವಿಶೇಷ ವಾರ್ಡ್‌ನಲ್ಲಿರುವ ಶ್ರೀಗಳಿಗೆ ವಿಶ್ರಾಂತಿ ಬೇಕಿರುವುದರಿಂದ ಹಾಗೂ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕಿರುವುದರಿಂದ ಶ್ರೀಗಳ ಭೇಟಿಗೆ ಭಕ್ತರು ಆಸ್ಪತ್ರೆಗೆ ಬರಬಾರದು ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧಲಿಂಗಸ್ವಾಮಿ ಮನವಿ ಮಾಡಿದ್ದಾರೆ. 


ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಇನ್ನೂ ಕೆಲವು ದಿನ ಶ್ರೀಗಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ವಾರ್ಡ್‌ಗೆ ಭಕ್ತಾದಿಗಳು ಬಂದರೆ ಶ್ರೀಗಳಿಗೆ ಮತ್ತೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ದಯಮಾಡಿ ದರ್ಶನಕ್ಕಾಗಿ ಪದೇ ಪದೇ ಆಸ್ಪತ್ರೆಗೆ ಬಂದು ತೊಂದರೆ ಕೊಡಬಾರದೆಂಬುದು ವೈದ್ಯರಾದ ಡಾ.ರೇಲಾ ಕೂಡ ಭಕ್ತರಲ್ಲಿ ಮನವಿ ಮಾಡಿದ್ದಾರೆ.