ಬೆಂಗಳೂರು: ವಿಧಾನಸೌಧದಲ್ಲಿ ಲಂಚದ ಹಾವಳಿ ಬಗ್ಗೆ ಇತ್ತೀಚೆಗಷ್ಟೇ ಕಳವಳ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದಲ್ಲಾಳಿಗಳಿಗೆ ವಿಧಾನಸೌಧದ ಬಾಗಿಲು ಮುಚ್ಚಲು ವಿಧಾನಸೌಧ ಹಾಗೂ ವಿಕಾಸಸೌಧವನ್ನು ಹೈ ಸೆಕ್ಯುರಿಟಿ ಝೋನ್‌(ಅತಿ ಭದ್ರತಾ ವಲಯ‌) ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. 


COMMERCIAL BREAK
SCROLL TO CONTINUE READING

‘ನಿತ್ಯವೂ ವಿಧಾನಸೌಧಕ್ಕೆ ದಲ್ಲಾಳಿಗಳು ಬರುತ್ತಿದ್ದಾರೆ. ದಲ್ಲಾಳಿಗಳ ವಿಡಿಯೋ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದೆ. ಇದರಿಂದ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ತೊಡಕಾಗುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಮಂಗಳವಾರ ತಿಳಿಸಿದರು. 


ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಹಾಗೂ ಸಚಿವರಿಂದ ಕೆಲಸ ಮಾಡಿಸಿ ಕೊಡುವುದಾಗಿ ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಹೀಗಾಗಿ, ವಿಧಾನಸೌಧ ಹಾಗೂ ವಿಕಾಸಸೌಧ ಪ್ರವೇಶಕ್ಕೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ವಿಧಾನಸೌಧ- ವಿಕಾಸಸೌಧಕ್ಕೆ ಭದ್ರತೆಯೂ ಅಗತ್ಯವಾದ್ದರಿಂದ ಅತಿ ಭದ್ರತಾ ವಲಯ ಎಂದು ಘೋಷಿಸುವ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆದಿದೆ ಎಂದಿದ್ದಾರೆ.


ಮೂಲಗಳ ಪ್ರಕಾರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೆಳಗ್ಗೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಶಕ್ತಿಸೌಧಕ್ಕೆ ಆಗಮಿಸುತ್ತಿದ್ದು, ಮುಖ್ಯಮಂತ್ರಿ ಸೇರಿ ದಂತೆ ಸಚಿವರು ದೈನಂದಿನ ಕೆಲಸ ಕಾರ್ಯ ಮಾಡಲು ಬಿಡುತ್ತಿಲ್ಲ. ಶಿಫಾರಸು ಪತ್ರ, ನೆರವು ಮತ್ತಿತರ ಸಹಾಯ ಕೇಳಿ ಬರುವುದು. ಕಚೇರಿಗಳ ಮುಂದೆ ಜಮಾವಣೆಗೊಳ್ಳುವುದು ಹೆಚ್ಚಾಗುತ್ತಿದೆ. ಹೀಗಾಗಿ, ಇದನ್ನು ನಿಯಂತ್ರಿಸಲು ಅತಿ ಭದ್ರತಾ ವಲಯ ಎಂದು ಘೋಷಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ವಿವರಿಸಿದರು.