ಕೊಡಗು ಜಿಲ್ಲೆಗೆ ನಾಳೆ ಸಿಎಂ ಕುಮಾರಸ್ವಾಮಿ ಭೇಟಿ
ಆಗಸ್ಟ್ 18ರಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 10.30ಕ್ಕೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಕೊಡಗು ಜಿಲ್ಲೆಗೆ ತೆರಳಲಿದ್ದಾರೆ.
ಬೆಂಗಳೂರು: ವರುಣನ ಆರ್ಭಟಕ್ಕೆ ತತ್ತರಿಸಿರುವ ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಳೆ (ಆಗಸ್ಟ್ 18) ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ಪರಿಶೀಲನೆ ಮಾಡಲಿದ್ದಾರೆ.
ಆಗಸ್ಟ್ 18ರಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 10.30ಕ್ಕೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಕೊಡಗಿಗೆ ತೆರಳಲಿದ್ದಾರೆ. ಆಗಸ್ಟ್ 19 ರ ಭಾನುವಾರದಂದು ಮೈಸೂರು ಜಿಲ್ಲೆಯ ನಂಜನಗೂಡು, ಕಬಿನಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಕೊಡಗು ಜಿಲ್ಲೆಗೆ ಅಗತ್ಯವಿರುವ ಪರಿಹಾರ ಸಾಮಗ್ರಿಗಳನ್ನು ಮೈಸೂರಿನಿಂದ ತರಿಸಿಕೊಳ್ಳುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಸೂಚಿಸಿದ್ದಾರೆ.
ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸಚಿವ ಆರ್.ವಿ.ದೇಶಪಾಂಡೆ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ನಾಳೆಯಿಂದ ಹೆಲಿಕಾಪ್ಟರ್ ಮೂಲಕ ಜನರನ್ನು ರಕ್ಷಿಸುವ ಕಾರ್ಯಾಚರಣೆಯೂ ಆರಂಭವಾಗಲಿದೆ. ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ನೆರವಿಗೆ ಸೇನಾ ಪಡೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ಮೈಸೂರು, ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳ ಕಂದಾಯ, ಅರಣ್ಯ ಇಲಾಖೆಯ ಸಿಬ್ಬಂದಿಯನ್ನೂ ಸಹ ಪರಿಹಾರ ಕಾರ್ಯಗಳಿಗಾಗಿ ಕೊಡಗು ಜಿಲ್ಲೆಗೆ ನಿಯೋಜಿಸಲಾಗುತ್ತಿದೆ. ಗಂಜಿ ಕೇಂದ್ರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಾಮಗ್ರಿ, ಹೊದಿಕೆಗಳನ್ನು ಮೈಸೂರಿನಿಂದ ಕಳುಹಿಸಲಾಗುತ್ತಿದೆ. ಅಲ್ಲದೆ 200 ಮಂದಿ ಸ್ವಯಂ ಸೇವಕರು ಮೈಸೂರಿನಿಂದ ಕೊಡಗು ಜಿಲ್ಲೆಗೆ ತೆರಳುತ್ತಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.