ಬೆಂಗಳೂರು : ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?


ಇದನ್ನೂ ಓದಿ:ಕಾನೂನಿ ಮುಂದೆ ಯಾರೂ ದೊಡ್ಡವರಲ್ಲ : ಕೇಂದ್ರ ಸಚಿವ ವಿ. ಸೋಮಣ್ಣ


ತಮ್ಮ ಪಕ್ಷದ ಮುಖ್ಯಮಂತ್ರಿ ಹುದ್ದೆಯನ್ನು ಮಾರಾಟ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಆರೋಪಿಸಿದ್ದರೂ ಅವರ ಮೇಲೆ ಕ್ರಮ ಇಲ್ಲ. ದಿನ ಬೆಳಗಾದರೆ ಭ್ರಷ್ಟಾಚಾರದ ಆರೋಪದ ಕೆಸರೆರಚಾಟದಲ್ಲಿ ತೊಡಗಿರುವ ಬಿಜೆಪಿ ಶಾಸಕರ ವಿರುದ್ಧವೂ ಯಾವ ಕ್ರಮವೂ ಇಲ್ಲ. ನರೇಂದ್ರ ಮೋದಿ ಅವರೇ ಈ ಮೌನಕ್ಕೆ, ಈ ನಿಷ್ಕ್ರೀಯತೆಗೆ ಏನು ಕಾರಣ? ಈ ಭ್ರಷ್ಟಾಚಾರದಲ್ಲಿ ನೀವೂ ಭಾಗಿದಾರರೆಂದು ತಿಳಿದುಕೊಳ‍್ಳಬಹುದೇ? 


ನಮ್ಮ ಸರ್ಕಾರದ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ.


ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು : ಛಲವಾದಿ ನಾರಾಯಣಸ್ವಾಮಿ


ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ, ನೂರಾರು ಕೋಟಿ ರೂಪಾಯಿ ಹಗರಣದ ಆರೋಪ ಎದುರಿಸುತ್ತಿರುವ  ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿರುವ ನಿಮಗೆ  ಇತರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಕರ್ನಾಟಕದ ಲೋಕಾಯುಕ್ತರು ಕೋರಿರುವ ಅನುಮತಿ ಬಗ್ಗೆ ಘನತೆವೆತ್ತ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿರುವುದೇಕೇ? ಅವರ ಮೇಲೆ ಒತ್ತಡ ಹೇರುತ್ತಿರುವರು ಯಾರು?


ಪ್ರಧಾನಿ ನರೇಂದ್ರ ಮೋದಿ ಅವರೇ, ಕಳೆದ ಹನ್ನೊಂದು ವರ್ಷಗಳಲ್ಲಿ ನಿರಂತರವಾಗಿ ನಿಮ್ಮ ಕಾರ್ಯಾಲಯದ ವಾಷಿಂಗ್ ಮೆಷಿನ್ ಕೆಲಸ ಮಾಡುತ್ತಿರುವುದನ್ನು ದೇಶ ಗಮನಿಸುತ್ತಿದೆ. ನಿಮ್ಮಿಂದಲೇ ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ  ವಿರೋಧ ಪಕ್ಷಗಳ ನಾಯಕರನ್ನೆಲ್ಲಾ ವಾಷಿಂಗ್ ಮೆಷಿನ್ ನಲ್ಲಿ ಹಾಕಿ ಪರಮ ಪ್ರಾಮಾಣಿಕರನ್ನಾಗಿ ಮಾಡುತ್ತಿರುವ ನಿಮ್ಮ ಚಾಕಚಕ್ಯತೆಗೆ ಶಹಭಾಸ್ ಅನ್ನಲೇ ಬೇಕು. ಅಧಿಕೃತ ಮಾಹಿತಿಯ ಪ್ರಕಾರವೇ 2014ರಿಂದ ಇಲ್ಲಿಯ ವರೆಗೆ ಭ್ರಷ್ಟಾಚಾರದ ಆರೋಪ ಹೊತ್ತಿರುವ 25 ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರಿದ್ದಾರೆ. ಇವರಲ್ಲಿ 23 ನಾಯಕರನ್ನು ಭ್ರಷ್ಟಾಚಾರದ ಆರೋಪಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಮುಕ್ತಗೊಳಿಸಿವೆ.


ಹಿಮಂತಾ ಶರ್ಮಾ, ಸುವೇಂದು ಅಧಿಕಾರಿ, ಹೆಚ್.ಡಿ.ಕುಮಾರಸ್ವಾಮಿ, ಅಜಿತ್ ಪವಾರ್, ಅಶೋಕ್ ಚವ್ಹಾಣ್, ನಾರಾಯಣ ರಾಣೆ, ಪ್ರತಾಪ್ ಸರ್‌ನಾಯಕ್ ಅವರಿಂದ ಹಿಡಿದು ಇತ್ತೀಚಿನ ಏಡ್ಸ್ ಟ್ರ್ಯಾಪ್ ಗಿರಾಕಿ ಮುನಿರತ್ನ ವರೆಗೆ ಎಷ್ಟೊಂದು ಭ್ರಷ್ಟರನ್ನು ವಾಷಿಂಗ್ ಮೆಷಿನ್ ನಲ್ಲಿ ತೊಳೆದು ನೀವು ಕ್ಲೀನ್ ಮಾಡಿಲ್ಲ? ಇವೆಲ್ಲ ಕೇವಲ ಧರ್ಮಾರ್ಥ ಸೇವೆಯೇ ಪ್ರಧಾನಿಗಳೇ? 


ಇದನ್ನೂ ಓದಿ:ಗಂಭೀರ ಆರೋಪ ಕೇಳಿ ಬಂದಾಗ ರಾಜೀನಾಮೆ ಸೂಕ್ತ ನಿರ್ಧಾರ : ನ್ಯಾ. ಸಂತೋಷ್‌ ಹೆಗ್ಡೆ


ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಪಕ್ಷದ ಖಜಾನೆಗೆ ಸಂದಾಯವಾಗಿರುವ ಚುನಾವಣಾ ಬಾಂಡ್ ಗಳ ಹಿಂದಿನ ಕೊಡುಗೈ ದಾನಿಗಳು ಯಾರು? ಅವರು ಕೊಟ್ಟದ್ದೆಷ್ಟು? ಅದಕ್ಕಾಗಿ ಅವರು ಪಡೆದದ್ದು ಎಷ್ಟು? ಎನ್ನುವುದು ಇಂದು ದೇಶದ ಜನರ ಕಣ್ಣಮುಂದಿದೆ. ನಿಮ್ಮ ಹನ್ನೊಂದು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ಲೂಟಿಗೈದವರು ದೇಶ ಬಿಟ್ಟು ಓಡಿಹೋಗಲು ದಾರಿ ಮಾಡಿಕೊಟ್ಟವರು ಯಾರು? ಅದಾನಿ-ಅಂಬಾನಿ ಅವರ ಸಂಪತ್ತು ಎಷ್ಟು ಪಟ್ಟು ಹೆಚ್ಚಾಯಿತು? ಬಡವರ ಗಳಿಕೆ ಎಷ್ಟು ಪಟ್ಟು ಕಡಿಮೆಯಾಯಿತು?


ನೀವು ಭ್ರಷ್ಟಾಚಾರದ ಬಗ್ಗೆ ಚರ್ಚೆ ಪ್ರಾರಂಭಿಸಿರುವುದನ್ನು ನೋಡಿ ಸಂತೋಷವಾಯಿತು. ನನ್ನ ವಿರುದ್ಧ ಭ‍್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಿ ಕುಣಿದಾಡುತ್ತಿರುವ ಪಾತ್ರಧಾರಿಗಳನ್ನಷ್ಟೇ ರಾಜ್ಯದ ಜನ ನೋಡಿದ್ದಾರೆ. ಈಗ ಇದರ ಹಿಂದಿರುವ ಸೂತ್ರಧಾರಿ ಯಾರು ಎನ್ನುವುದು ಕೂಡಾ ಜನರಿಗೆ ಗೊತ್ತಾಗಲಿ. ಮೋದಿಯವರೇ, ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆ ಮಾಡಲು ನೀವು ಸಿದ್ಧ ಇದ್ದರೆ ನಾನು ಸದಾ ಸಿದ್ಧ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.