ಬೆಂಗಳೂರು: ರಾಜ್ಯ ಮತ್ತು ಹೊರ ರಾಜ್ಯಗಳ ಪ್ರಮುಖ ಧಾರ್ಮಿಕ, ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ರಿಯಾಯಿತಿ ದರದಲ್ಲಿ ಎಲ್ಲ ಧರ್ಮದ ಪ್ರವಾಸಿಗರನ್ನು ಕರೆದೊಯ್ಯುವ "ಪುನೀತ ಯಾತ್ರೆ"ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ರೂಪಿಸಿರುವ ಪುನೀತ ಯಾತ್ರೆಗೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಚಾಲನೆ ನೀಡಿದ ಸಿದ್ದರಾಮಯ್ಯ, ಯಾತ್ರಾರ್ಥಿಗಳಿಗೆ ಶುಭ ಕೋರಿದರು. ಈ ಹೊಸ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸುವುದರ ಜೊತೆಗೆ ಯೋಜನೆಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.


ಎರಡು ಹಂತದಲ್ಲಿ ಪ್ರವಾಸ ಆಯೋಜಿಸಲಾಗುವುದು. ಒಟ್ಟು 1.38 ಲಕ್ಷ ಮಂದಿ ಇದರ ಲಾಭ ಪಡೆಯುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಇಂದಿನಿಂದಲೇ ಹೊಯ್ಸಳ, ಗೊಮ್ಮಟೇಶ್ವರ ದರ್ಶನ, ಉತ್ತರ ಕರ್ನಾಟಕ, ಭಾರತದ ವಿಸ್ಮಯ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ತಿರುಪತಿ, ಕಾಳಹಸ್ತಿ, ಮಂತ್ರಾಲಯ ಮತ್ತು ಶಿರಡಿಯನ್ನು ಪ್ಯಾಕೇಜ್ ಒಳಗೊಂಡಿದೆ ಎಂದು ತಿಳಿಸಿದರು. 


ಅಕ್ಟೋಬರ್ 15ರಿಂದ ಎರಡನೇ ಹಂತದ ಯಾತ್ರೆ ಆರಂಭವಾಗಲಿದೆ. ಇದರಲ್ಲಿ ರಾಜ್ಯದ ಇತಿಹಾಸ ಪ್ರಸಿದ್ಧ ಚರ್ಚ್, ಮಸೀದಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಗಾಣಗಾಪುರ, ದತ್ತಾತ್ರೇಯ ಮಳಖೇಡ ರಾಘವೇಂದ್ರ, ಸನ್ನತಿ ಚಂದ್ರಲಾಂಬಮ, ಸವದತ್ತಿ ಎಲ್ಲಮ್ಮ, ಶರಣಬಸವರ ಪವಿತ್ರ ಸ್ಥಳಗಳ ದರ್ಶನ ಇರಲಿದೆ. ನಂಜನಗೂಡು, ಬಾಬಾ ಬುಡನಗಿರಿ, ಆದಿಚುಂಚನಗಿರಿ, ಗೋಕರ್ಣ, ಶಿರಸಿ ಮಾರಿಕಾಂಬೆ, ಶಿರಡಿ, ಶಬರಿಮಲೆ, ಮಧುರೆಗೆ ಪ್ರವಾಸಿಗರನ್ನು ಕರೆದಯೊಯ್ಯಲಾಗುವುದು. ರಾಜ್ಯದ ಜನತೆಗೆ ಸರ್ಕಾರ ನೀಡುತ್ತಿರುವ ದಸರೆಯ ಕೊಡುಗೆ ಇದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 


ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರರು ಹಾಜರಿದ್ದರು.